ಶಿಲ್ಲಾಂಗ್: ‘ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ತುರಾದ ತಮ್ಮ ತೋಟದ ಮನೆಯಲ್ಲಿ, ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪ ಹೊತ್ತಿರುವ ಮೇಘಾಲಯದ ಬಿಜೆಪಿ ಉಪಾಧ್ಯಕ್ಷ ಬರ್ನಾಡ್ ಎನ್. ಮರಾಕ್ ಅವರ ವಿರುದ್ಧ ಮಂಗಳವಾರ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಅಲ್ಲಿನ ಎಸ್‌ಪಿ ವಿವೇಕಾನಂದ ಸಿಂಗ್ ಹೇಳಿದ್ದಾರೆ.
ಬರ್ನಾಡ್ ಅವರ ತೋಟದ ಮನೆಯ ಮೇಲೆ ಶನಿವಾರ ಪೊಲೀಸರು ದಾಳಿ ನಡೆಸಿ, ಆರು ಮಂದಿ ಹೆಣ್ಣುಮಕ್ಕಳನ್ನು ರಕ್ಷಿಸಿದ್ದರು ಹಾಗೂ 73 ಮಂದಿಯನ್ನು ಬಂಧಿಸಿದ್ದರು. ದಾಳಿ ಬೆನ್ನಲ್ಲೇ ಮರಾಕ್ ನಾಪತ್ತೆಯಾಗಿದ್ದಾರೆ.
ತುರಾದ ನ್ಯಾಯಾಲಯವೂ ಸಹ ಮರಾಕ್ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಪೊಲೀಸರು, ವಿಚಾರಣೆಗೆ ಸಹಕರಿಸುವಂತೆ ಮರಾಕ್ ಅವರನ್ನು ಕೇಳಿಕೊಂಡಿದ್ದಾರಾದರೂ, ಮರಾಕ್ ಸಹಕರಿಸುತ್ತಿಲ್ಲ.
ಮರಾಕ್ ಅವರ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇನ್ನೊಂದೆಡೆ ಮರಾಕ್ ಅವರು, ‘ಮೇಘಾಲಯದ ಮುಖ್ಯಮಂತ್ರಿ ಕಾರ್ನಾಡ್ ಕೆ. ಸಂಗಮ ಅವರು ತಮ್ಮ ಮೇಲೆ ರಾಜಕೀಯ ಸೇಡನ್ನು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಆದರೆ, ಮೇಘಾಲಯದ ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್‌ಸಾಂಗ್ ಅವರು ಮರಾಕ್ ಅವರ ಆರೋಪವನ್ನು ಅಲ್ಲಗಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.