ADVERTISEMENT

ಏಕಕಾಲ ಚುನಾವಣೆ: ವಾಸ್ತವಿಕ ನೆಲೆಗಟ್ಟಿನಲ್ಲಿ ಕಾರ್ಯಸಾಧುವಲ್ಲ; ವಿಪಕ್ಷಗಳ ಟೀಕೆ

2015ರಲ್ಲಿ ಸಂಸದೀಯ ಸಮಿತಿ ಮುಂದೆಯೂ ಮಿಶ್ರ ಅಭಿಪ್ರಾಯ ದಾಖಲಿಸಿದ್ದ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 13:54 IST
Last Updated 3 ಸೆಪ್ಟೆಂಬರ್ 2023, 13:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಚಿಂತನೆಯು ವಾಸ್ತವಿಕ ನೆಲೆಗಟ್ಟಿನಲ್ಲಿ ಕಾರ್ಯಸಾಧುವಲ್ಲ ಹಾಗೂ ಇದು, ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ’ ಎಂದು ವಿರೋಧಪಕ್ಷಗಳು ಟೀಕಿಸಿವೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು 2015ರಲ್ಲಿ ರಚನೆಯಾಗಿದ್ದ ಸಂಸದೀಯ ಸ್ಥಾಯಿ ಸಮಿತಿಯ ಎದುರು ವಿವಿಧ ಪಕ್ಷಗಳು ಈ ಕುರಿತಂತೆ ಮಿಶ್ರ ಪ್ರತಿಕ್ರಿಯೆಯನ್ನು ದಾಖಲಿಸಿದ್ದವು.

ADVERTISEMENT

ಆಗ ಕಾಂಗ್ರೆಸ್‌ ಪಕ್ಷ, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ, ಎಐಎಂಐಎಂ ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಎಐಎಡಿಎಂಕೆ, ಮುಸ್ಲಿಂ ಲೀಗ್‌, ಡಿಎಂಡಿಕೆ, ಅಸ್ಸಾಂ ಗಣ ಪರಿಷತ್, ಅಕಾಲಿದಳ ಇನ್ನೊಂದೆಡೆ ಈ ಚಿಂತನೆಯನ್ನು ಬೆಂಬಲಿಸಿದ್ದವು.

ಸಮಿತಿಯ ಎದುರು ಎಲ್ಲ ಪಕ್ಷಗಳು ಅಭಿಪ್ರಾಯ ದಾಖಲಿಸಿದ್ದವು. ‘ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವುದು ವೆಚ್ಚ ಮಿತವ್ಯಯಿಯಾದ ಕ್ರಮ. ಆದರೆ, ಅದರ ಅನುಷ್ಠಾ ನವು ಕಷ್ಟಸಾಧ್ಯ ಎಂದು ಪ್ರತಿಪಾದಿಸಿದ್ದವು.

ಕಾಂಗ್ರೆಸ್‌ ಪಕ್ಷದ ಸದಸ್ಯ ಇ.ಎಂ.ಸುದರ್ಶನ್‌ ನಾಚಿಯಪ್ಪನ್‌ ನೇತೃತ್ವದ ‘ಸಿಬ್ಬಂದಿ, ಸಾರ್ವಜನಿಕ ಅಹವಾಲು, ಕಾನೂನು ಕುರಿತು ಸಂಸದೀಯ ಸ್ಥಾಯಿ ಸಮಿತಿ’ಯ ವರದಿಯನ್ನು 2015ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ‘ಕೆಲವು ವಿಧಾನಸಭೆಗಳಿಗೆ ಲೋಕಸಭೆ ಅವಧಿಯ ಮಧ್ಯಭಾಗದಲ್ಲಿ ಹಾಗೂ ಉಳಿದ ವಿಧಾನಸಭೆಗಳಿಗೆ ಲೋಕಸಭೆ ಅವಧಿಯ ಅಂತ್ಯದಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ನಡೆಸಬೇಕು’ ಎಂದು ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಸ್ಥಾಯಿ ಸಮಿತಿಯು ಎದುರು ಲಿಖಿತವಾಗಿ ಅಭಿಪ್ರಾಯವನ್ನು ದಾಖಲಿಸಿದ್ದ ಕಾಂಗ್ರೆಸ್‌ ಪಕ್ಷವು, ‘ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವುದು ಸೂಕ್ತ ಎನಿಸಬಹುದು. ಆದರೆ, ಪ್ರಾಯೋಗಿಕವಲ್ಲ. ಕಾರ್ಯಸಾಧುವಲ್ಲ. ಇದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮತೋಲನ ತಪ್ಪಬಹುದು’ ಎಂದು ಹೇಳಿತ್ತು.

ಆದರೆ, ತೃಣಮೂಲ ಕಾಂಗ್ರೆಸ್ ಈ ಚಿಂತನೆಯನ್ನು ತಿರಸ್ಕರಿಸಿತ್ತು. ಅವಧಿಪೂರ್ವದಲ್ಲಿ ವಿಧಾನಸಭೆ ವಿಸರ್ಜನೆಗೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ರಾಷ್ಟ್ರೀಯ ತುರ್ತು ಸ್ಥಿತಿ ಘೋಷಣೆ ಹೊರತುಪಡಿಸಿ ನಿಗದಿತ ಅವಧಿ ಮೀರಿ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಚುನಾವಣೆ ಮುಂದೂಡುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ’ ಎಂದಿತ್ತು.

ಆದರೆ, ಇದೇ ಸಂದರ್ಭದಲ್ಲಿ ರಾಜ್ಯಗಳಲ್ಲಿ  ಮುನಿಸಿಪಾಲಿಟಿಗಳು ಮತ್ತು ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವ ಕುರಿತಂತೆ ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ಸಹಮತವನ್ನು ವ್ಯಕ್ತಪಡಿಸಿತ್ತು. 

ಸಿಪಿಐ ಪಕ್ಷವು ‘ಏಕಕಾಲದಲ್ಲಿ ಚುನಾವಣೆ ನಡೆಸುವುದು ಸೂಕ್ತ ಎನಿಸಿದರೂ ಸರ್ಕಾರವು ಬಹುಮತ ಕಳೆದುಕೊಂಡಾಗ ಮಧ್ಯಂತರ ಚುನಾವಣೆ ನಡೆಸುವುದು ಸೇರಿದಂತೆ ಹಲವು ಪ್ರಶ್ನೆಗಳಿವೆ. ಏಕಕಾಲದಲ್ಲಿ ಚುನಾವಣೆ ನಡೆಸಲು ಕೆಲ ವಿಧಾನಸಭೆಗಳ ಅವಧಿ ಕಡಿತಗೊಳಿಸುವ ಪ್ರಸ್ತಾಪಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.

‘ಏಕಕಾಲದಲ್ಲಿ ಚುನಾವಣೆ ಕಾರ್ಯಸಾಧುವಲ್ಲ’ ಎಂದು ಎನ್‌ಸಿಪಿ ಪ್ರತಿಪಾದಿಸಿದ್ದರೆ, ಎಐಎಂಐಎಂ ಪಕ್ಷ, ‘ಸಂಕೀರ್ಣ ರಾಜಕೀಯ ಸ್ಥಿತಿಯಲ್ಲಿ ಇದು ಸ್ವಲ್ಪಮಟ್ಟಿಗೆ ಕಾರ್ಯಸಾಧು ಎನಿಸುತ್ತದೆ’ ಎಂದಿತ್ತು. ‘ಅತಂತ್ರ ವಿಧಾನಸಭೆ ರಚನೆ, ಸರ್ಕಾರಕ್ಕೆ ಬಹುಮತ ನಷ್ಟ ಸಾಧ್ಯತೆಗೆ ಸಂವಿಧಾನಕ್ಕೆ ತಿದ್ದುಪಡಿ ಪರಿಹಾರವಾಗಲಾರದು’ ಎಂದೂ ಹೇಳಿತ್ತು.

ಎಐಎಡಿಎಂಕೆ ಪಕ್ಷವು, ‘ಈಗ ಅಮೆರಿಕದಲ್ಲಿ ಇರುವಂತೆ ಏಕಕಾಲದಲ್ಲಿ ಚುನಾವಣೆ ನಡೆಸಲು ನಿಗದಿತ ಅವಧಿ ಮತ್ತು ದಿನಾಂಕವನ್ನು ಪೂರ್ವಭಾವಿಯಾಗಿ ನಿಗದಿಪಡಿಸುವುದು ಸೂಕ್ತ ಎನಿಸುತ್ತದೆ’ ಎಂದು ಸಲಹೆ ಮಾಡಿತ್ತು.

ಅಸ್ಸಾಂ ಗಣಪರಿಷತ್‌ ಪಕ್ಷವು, ಏಕಕಾಲದಲ್ಲಿ ಚುನಾವಣೆಯು ನಡೆದರೆ ಸಣ್ಣ ಪಕ್ಷಗಳ ಮೇಲಿನ ಆರ್ಥಿಕ ಹೊರೆ ಕುಗ್ಗಲಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಮುಸ್ಲಿಂ ಲೀಗ್‌ ಪಕ್ಷವು, ‘ಇದರಿಂದ ದೇಶದ ಸಮಯ, ಸಂಪನ್ಮೂಲವು ಉಳಿಯಲಿದೆ’ ಎಂದಿತ್ತು.

ಅಕಾಲಿ ದಳ ಪಕ್ಷವು ಒಟ್ಟಾರೆ ಚಿಂತನೆಯನ್ನು ಬೆಂಬಲಿಸಿದ್ದರೂ ಕೆಲ ಆಕ್ಷೇಪಗಳನ್ನೂ ದಾಖಲಿಸಿತ್ತು. ಸರ್ಕಾರವು ಪದಚ್ಯುತಗೊಂಡ ಸಂದರ್ಭದಲ್ಲಿ ಅನುಸರಿಸಲಾಗುವ ಮಾರ್ಗವೇನು? ಹೊಸ ಸರ್ಕಾರ ರಚನೆಯಾದರೆ ಅದರ ಅವಧಿಯು ಎಷ್ಟಿರುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿತ್ತು.

ಇಂಡಿಯಾ ಅರ್ಥಾತ್‌ ಭಾರತವು ರಾಜ್ಯಗಳ ಒಕ್ಕೂಟ. ‘ಒಂದು ದೇಶ ಒಂದು ಚುನಾವಣೆ’ ಚಿಂತನೆಯು ಒಕ್ಕೂಟ ಮತ್ತು ಎಲ್ಲ ರಾಜ್ಯಗಳ ಮೇಲಿನ ದಾಳಿಯಾಗಿದೆ.

-ರಾಹುಲ್‌ಗಾಂಧಿ ಕಾಂಗ್ರೆಸ್‌

ದೇಶಕ್ಕೆ ಮುಖ್ಯವಾದುದು ಏನು? ಒಂದು ದೇಶ ಒಂದು ಚುನಾವಣೆಯೇ ಅಥವಾ ಒಂದು ದೇಶ ಒಂದೇ ಶಿಕ್ಷಣ ವ್ಯವಸ್ಥೆಯೇ (ಶ್ರೀಮಂತ ಅಥವಾ ಬಡವ. ಎಲ್ಲರಿಗೂ ಸಮಾನವಾದ ಗುಣಮಟ್ಟದ ಶಿಕ್ಷಣ) ಅಥವಾ ಒಂದೇ ರೀತಿಯ ಚಿಕಿತ್ಸೆಯೇ. ಏಕಕಾಲದಲ್ಲಿ ಚುನಾವಣೆಯಿಂದ ಸಾಮಾನ್ಯ ಜನರಿಗೆ ಸಿಗುವುದೇನು?

-ಅರವಿಂದ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿ

ಏಕಕಾಲದಲ್ಲಿ ಚುನಾವಣೆ ಕುರಿತು ರಚನೆಯಾಗಿರುವ ಉನ್ನತ ಮಟ್ಟದ ಸಮಿತಿಯು ಸಾಂಪ್ರದಾಯಿಕ ಕಸರತ್ತು. ಯಾವ ಸಮಯದಲ್ಲಿ ಈ ಚಿಂತನೆ ನಡೆದಿದೆ ಎಂಬುದು ಶಂಕಾಸ್ಪದ. ಬಹುಶಃ ಶಿಫಾರಸುಗಳು ಈಗಾಗಲೇ ಸಿದ್ಧವಾಗಿವೆ ಎನಿಸುತ್ತದೆ.

-ಜೈರಾಮ್‌ ರಮೇಶ್‌ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.