ADVERTISEMENT

ಅಂತರರಾಷ್ಟ್ರೀಯ ಗಡಿಯಂತೆ ಭಾಸವಾಗುತ್ತಿದೆ: ದೆಹಲಿ ಗಡಿ‌ ಬಗ್ಗೆ ರೈತರ ಅಭಿಪ್ರಾಯ

ಪಿಟಿಐ
Published 3 ಫೆಬ್ರುವರಿ 2021, 17:02 IST
Last Updated 3 ಫೆಬ್ರುವರಿ 2021, 17:02 IST
ಸಿಂಘು ಗಡಿಯಲ್ಲಿ ಬ್ಯಾರಿಕೇಡ್, ತಂತಿ ಬೇಲಿಗಳನ್ನು ಹಾಕಿರುವುದು – ಪಿಟಿಐ ಚಿತ್ರ
ಸಿಂಘು ಗಡಿಯಲ್ಲಿ ಬ್ಯಾರಿಕೇಡ್, ತಂತಿ ಬೇಲಿಗಳನ್ನು ಹಾಕಿರುವುದು – ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಗಳು ಈಗ ಅಂತರರಾಷ್ಟ್ರೀಯ ಗಡಿಗಳಂತೆ ಭಾಸವಾಗುತ್ತಿದೆ ಎಂದು ಪ್ರತಿಭಟನಾ ನಿರತ ರೈತರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳು, ಲೋಹದ ತಡೆಗೋಡೆಗಳು, ತಂತಿಬೇಲಿಗಳೂ ಸೇರಿದಂತೆ ತಾತ್ಕಾಲಿಕ ಗೋಡೆಗಳನ್ನೇ ನಿರ್ಮಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಆದರೆ, ಕಾನೂನು ಸುವ್ಯವಸ್ಥೆ ವಿಷಯ ಮುಂದಿಟ್ಟುಕೊಂಡು ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಗಣರಾಜ್ಯೋತ್ಸವದಂದು ಹಿಂಸಾಚಾರ ನಡೆದ ಬಳಿಕ ಸಿಂಘು, ಗಾಜಿಪುರ ಹಾಗೂ ಟಿಕ್ರಿ ಗಡಿಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಜನವರಿ 26ರಂದು ಟ್ರ್ಯಾಕ್ಟರ್‌ ರ್‍ಯಾಲಿಗೆ ನಿಗದಿಪಡಿಸಿದ್ದ ಮಾರ್ಗವನ್ನು ಧಿಕ್ಕರಿಸಿ ನೂರಾರು ಪ್ರತಿಭಟನಾಕಾರರು ಮುನ್ನುಗ್ಗಿದ್ದರಿಂದ ಪೊಲೀಸರ ಜತೆ ಘರ್ಷಣೆ ಉಂಟಾಗಿತ್ತು. ಪ್ರತಿಭಟನಾಕಾರರು ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜವನ್ನೂ ಹಾರಿಸಿದ್ದರು.

ಇದಾದ ಬಳಿಕ ದೆಹಲಿ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿದ್ದರ ಜತೆಗೆ ಹೆಚ್ಚುವರಿಯಾಗಿ ಬ್ಯಾರಿಕೇಡ್, ತಂತಿ ಬೇಲಿಗಳನ್ನುಹಾಕಲಾಗಿದೆ.

‘ಪ್ರತಿಭಟನಾ ಸ್ಥಳಗಳು ಅಂತರರಾಷ್ಟ್ರೀಯ ಗಡಿಗಳಂತೆ ಭಾಸವಾಗುತ್ತಿವೆ. ನಾವೇನು ಪಾಕಿಸ್ತಾನದಿಂದ ಬಂದವರೇ? ಒಂದು ಕಡೆಯಿಂದ ಅವರು (ಸರ್ಕಾರ) ನಮ್ಮ ಬಳಿ ಮಾತುಕತೆ ಬಯಸುತ್ತಿದ್ದಾರೆ. ಮತ್ತೊಂದೆಡೆ ನಗರದ ಸಂಪರ್ಕ ಕಡಿತಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ರೈತ ನಾಯಕ ಕುಲ್ವಂತ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.