ಶಬರಿಮಲೆ, ಕೇರಳ: ಕೋವಿಡ್–19 ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮುಖಾಂತರ, ಭಾನುವಾರ ಸಂಜೆ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು.
ಮಂಡಲ–ಮಕರವಿಳಕ್ಕು ಕಾಲವಾದ ಮುಂದಿನ ಎರಡು ತಿಂಗಳು ದೇವಸ್ಥಾನ ತೆರೆದಿರಲಿದೆ. ಸೋಮವಾರ ಬೆಳಿಗ್ಗೆಯಿಂದ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಮುಖ್ಯಅರ್ಚಕರಾದ ಎ.ಕೆ.ಸುಧೀರ್ ನಂಬೂದಿರಿ ಅವರು ಸಂಜೆ 5 ಗಂಟೆಯ ವೇಳೆಗೆ ಗರ್ಭಗುಡಿ ತೆರೆದು ದೀಪವನ್ನು ಹಚ್ಚಿದರು.
ನಿತ್ಯ 1 ಸಾವಿರ ಭಕ್ತರಂತೆ, ಮುಖಾಂತರ ಸಮಯ ಕಾಯ್ದಿರಿಸಿದ 10 ರಿಂದ 60 ವರ್ಷದ ವಯಸ್ಸಿನ ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶ ದೊರೆಯಲಿದೆ. ಶನಿವಾರ ಮತ್ತು ಭಾನುವಾರ 2 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರಲಿದೆ.
ಪಂಬ ಮತ್ತು ನೀಲಕ್ಕಲ್‌ಗೆ ತಲುಪುವ 48 ಗಂಟೆಗಳ ಮೊದಲು ಕೋವಿಡ್–19 ಪರೀಕ್ಷೆ ಮಾಡಿಸಿಕೊಂಡು, ಸೋಂಕು ಇಲ್ಲ ಎನ್ನುವ ದೃಢೀಕರಣ ಪತ್ರ ತರುವುದು ಕಡ್ಡಾಯ.ದೇವಸ್ಥಾನದ ಆವರಣದಲ್ಲಿ ಭಕ್ತರು ಉಳಿಯಲು ಅವಕಾಶವಿಲ್ಲ ಎಂದು ತಿರುವಂಕೂರ್ ದೇವಸ್ವಂ ಮಂಡಳಿ ತಿಳಿಸಿದೆ. 2 ತಿಂಗಳಲ್ಲಿ ಅಂದಾಜು 85 ಸಾವಿರ ಭಕ್ತರು ಪೂಜೆ ಸಲ್ಲಿಸುವ ನಿರೀಕ್ಷೆಯಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನಿರೀಕ್ಷೆಯಿಂದಾಗಿ ತಿರುವನಂತಪುರ, ಕೊಟ್ಟಾಯಂ, ಚೆಂಗನ್ನೂರು, ತಿರುವಲ್ಲದ ಎಲ್ಲ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಆ್ಯಂಟಿಜೆನ್ ಪರೀಕ್ಷಾ ಕೇಂದ್ರಗಳನ್ನು ಕೇರಳದ ಆರೋಗ್ಯ ಇಲಾಖೆ ತೆರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.