ಲಖನೌ: ಹನುಮಂತನ ಜಾತಿ ಯಾವುದು ಎಂಬ ಚರ್ಚೆಗೆ ಹೊಸದೊಂದು ಆಸಕ್ತಿಕರ ತಿರುವು ಸಿಕ್ಕಿದೆ. ಹನುಮಂತ ದಲಿತ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಚರ್ಚೆ ಹುಟ್ಟು ಹಾಕಿದ್ದರು. ಈಗ ಅವರದ್ದೇ ಪಕ್ಷದ ಮತ್ತು ಅವರದ್ದೇ ರಾಜ್ಯದ ವಿಧಾನ ಪರಿಷತ್ ಸದಸ್ಯ ಬುಕ್ಕಲ್ ನವಾಬ್ ಎಂಬವರು ಹನುಮಂತ ವಾಸ್ತವದಲ್ಲಿ ‘ಮುಸ್ಲಿಂ’ ಎಂದು ಹೇಳಿದ್ದಾರೆ.
‘ಹನುಮಂತ ದೇವರು ಎಲ್ಲರಿಗೂ ಸೇರಿದವರು. ನನಗೆ ಅನಿಸುವ ಪ್ರಕಾರ, ಹನುಮಾನ್‌ಜಿ ವಾಸ್ತವದಲ್ಲಿ
ಮುಸ್ಲಿಂ ಆಗಿದ್ದರು. ಹಾಗಾಗಿಯೇ ಹನುಮಾನ್ ಎಂಬುದನ್ನು ಹೋಲುವ ಹೆಸರುಗಳು ಮುಸ್ಲಿಮರಲ್ಲಿ ಈಗಲೂ ಇವೆ’ ಎಂದು ಅವರು ಹೇಳಿದ್ದಾರೆ. ರೆಹಮಾನ್, ರಮ್ಜಾನ್, ಫರ್ಮಾನ್, ಖುರ್ಬಾನ್ ಮುಂತಾದ ಹೆಸರುಗಳನ್ನು ಅವರು ಉದಾಹರಣೆಯಾಗಿ ಕೊಟ್ಟಿದ್ದಾರೆ.
ಕಳೆದ ವರ್ಷದ ವರೆಗೆಎಸ್‌ಪಿಯಲ್ಲಿದ್ದ ನವಾಬ್ ಅವರು ಯೋಗಿ ಸರ್ಕಾರ ಬಂದ ಬಳಿಕೆ ಬಿಜೆಪಿ ಸೇರಿದ್ದರು. ಕಳೆದ ವರ್ಷ ಹನುಮಂತ ದೇವಾಲಯದಲ್ಲಿ ನವಾಬ್ ಪೂಜೆ ಮಾಡಿದ್ದರು. ಹನುಮಂತ ದೇವಾಲಯಕ್ಕೆ 30 ಕೆ.ಜಿ. ತೂಕದ ಹಿತ್ತಾಳೆ ಘಂಟೆಯೊಂದನ್ನು ದೇಣಿಗೆ ನೀಡಿದ್ದರು. ಹನುಮಂತನ ಜಾತಿಯ ಬಗ್ಗೆ ಹೇಳಿಕೆ ಕೊಟ್ಟ ಇತ್ತೀಚಿನ ವ್ಯಕ್ತಿ ಇವರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹನುಮಂತ ಜಾತಿ ವಿಷಯ ಪ್ರಸ್ತಾಪ ಆಗಿತ್ತು. ‘ಹನುಮಾನ್ ಕಾಡಿನಲ್ಲಿದ್ದವನು, ಅವಕಾಶ ವಂಚಿತ ದಲಿತ’ ಎಂದು ಯೋಗಿ ಹೇಳಿದ್ದರು. ಆದರೆ, ಇದಕ್ಕೆ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಾದ ಬಳಿಕ, ಭೋಪಾಲ್‌ನ ಜೈನ ಅರ್ಚಕರೊಬ್ಬರು, ಹನುಮಂತ ದಲಿತ ಅಲ್ಲ, ಜೈನ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.