ಭುವನೇಶ್ವರ: ಪುರಿಯ ಜಗನ್ನಾಥ ದೇವಸ್ಥಾನದ ಹೆಸರಿನಲ್ಲಿ ಒಡಿಶಾ ಮತ್ತು ಇತರೆ ಆರು ರಾಜ್ಯಗಳಲ್ಲಿ ಒಟ್ಟು 60,822 ಎಕರೆ ಭೂಮಿ ಇದೆ ಎಂದು ಒಡಿಶಾದ ಕಾನೂನು ಸಚಿವ ಜಗನ್ನಾಥ ಸರಕ ಶನಿವಾರ ವಿಧಾನಸಭೆಯಲ್ಲಿ ತಿಳಿಸಿದರು.
ಬಿಜೆಡಿ ಸದಸ್ಯ ಪ್ರಶಾಂಗ ಬೆಹೆರಾ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಮಹಾಪ್ರಭು ಜಗನ್ನಾಥ ಬಿಜೆ, ಶ್ರೀಕ್ಷೇತ್ರ ಪುರಿ ಹೆಸರಿನಲ್ಲಿ ಒಡಿಶಾದ 34 ಜಿಲ್ಲೆಗಳಲ್ಲಿ 60,426.943 ಎಕರೆ ಭೂಮಿ ಇದೆ’ ಎಂದು ತಿಳಿಸಿದ್ದಾರೆ.
ಇದರಲ್ಲಿ ಶ್ರೀ ಜಗನ್ನಾಥ ದೇವಸ್ಥಾನ ಆಡಳಿತವು (ಎಸ್‌ಜೆಟಿಎ), 38,061.892 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ವೀಕರಿಸಿದೆ. ಅಂತೆಯೇ, ಇತರೆ ಆರು ರಾಜ್ಯಗಳಲ್ಲಿ 395.252 ಎಕರೆ ಭೂಮಿ ಇದೆ ಎಂದು ತಿಳಿಸಿದರು.
ದೇವಸ್ಥಾನದ ಭೂಮಿ ಒತ್ತುವರಿ ತೆರವು ಕೋರಿ ದೇವಸ್ಥಾನ ಆಡಳಿತವು 974 ದೂರುಗಳನ್ನು ವಿವಿಧ ತಹಶೀಲ್ದಾರ್‌ಗಳ ವ್ಯಾಪ್ತಿಯಲ್ಲಿ ದಾಖಲಿಸಿದೆ. ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆಯ ಅನುಸಾರ ಈ ದೂರುಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.