ತಿರುವನಂತಪುರ: ಕೋವಿಡ್–19 ಕಾರಣದಿಂದ ಐದು ತಿಂಗಳಿನಿಂದ ಮುಚ್ಚಲಾಗಿದ್ದ ಇಲ್ಲಿನ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಬುಧವಾರದಿಂದ ಪುನರಾರಂಭವಾಗಲಿದ್ದು, ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 8ರಿಂದ 11ರವರೆಗೆ ದರ್ಶನ, ಸಂಜೆ 5ರಿಂದ 6.45ರವರೆಗೆ ದೀಪಾರಾಧನೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ. ಮಾರ್ಚ್ 21ರಿಂದ ದೇವಾಲಯವನ್ನು ಬಂದ್ ಮಾಡಲಾಗಿತ್ತು.
‘ದೇವರ ದರ್ಶನಕ್ಕಾಗಿ ಭಕ್ತರಿಗೆ ಸೂಕ್ತವಾದ ವ್ಯವಸ್ಥೆ ಮಾಡಲಾಗಿದೆ. ಅಂತರ ಕಾಪಾಡಿಕೊಳ್ಳಲು ನೆಲದ ಮೇಲೆ ಗುರುತುಗಳನ್ನು ಮಾಡಲಾಗಿದೆ. ಬ್ಯಾರಿಕೇಡ್‌ಗಳನ್ನೂ ಅಳವಡಿಸಲಾಗಿದೆ’ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಆನ್‌ಲೈನ್ ಬುಕಿಂಗ್: ‘ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಒಂದು ದಿನ ಮುಂಚಿತವಾಗಿಯೇ spst.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಬೇಕು. ದೇವಾಲಯದ ಭೇಟಿ ಸಮಯದಲ್ಲಿ ಆನ್‌ಲೈನ್ ಬುಕಿಂಗ್ ಮಾಡಿದ ಪ್ರತಿಯ ಜೊತೆಗೆ ಆಧಾರ್ ಕಾರ್ಡ್ ಅನ್ನೂ ಜತೆಗೆ ಒಯ್ಯಬೇಕು. ದೇವಾಲಯ ಪ್ರವೇಶಕ್ಕೂ ಮುನ್ನ ರಿಜಿಸ್ಟರ್‌ನಲ್ಲಿ ತಮ್ಮ ವಿವರಗಳನ್ನು ಭಕ್ತರು ನಮೂದಿಸಬೇಕು’ ಎಂದೂ ಮೂಲಗಳು ಹೇಳಿವೆ.
‘ಒಮ್ಮೆಲೇ 35 ಭಕ್ತರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ದಿನದಲ್ಲಿ ಗರಿಷ್ಠ 665 ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 60 ವರ್ಷಕ್ಕೆ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ’ ಎಂದೂ ದೇವಾಲಯದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.