ನವದೆಹಲಿ (ಪಿಟಿಐ): ‘ಅಯೋಧ್ಯೆಯೇ ಭಗವಾನ ರಾಮನ ಜನ್ಮಸ್ಥಳ ಎನ್ನುವುದು ಹಿಂದೂಗಳ ನಂಬಿಕೆ ಮತ್ತು ವಿಶ್ವಾಸವಾಗಿದೆ. ಅದರಲ್ಲೂ ವಿವಾದಿತ ಸ್ಥಳದಲ್ಲೇ ರಾಮ ಜನಿಸಿದ್ದು’ ಎಂದು ರಾಮ ಲಲ್ಲಾ ವಿರಾಜಮಾನ್ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
'ಹಿಂದೂ ಪುರಾಣಗಳ ಅನ್ವಯ ಅಯೋಧ್ಯೆಯಲ್ಲೇ ರಾಮ ಜನಿಸಿದ್ದಾನೆ ಮತ್ತು ಇದು ಎಷ್ಟು ತರ್ಕಬದ್ಧ ಎನ್ನುವ ಬಗ್ಗೆ ನ್ಯಾಯಾಲಯ ಪರಾಮರ್ಶೆ ಮಾಡಬಾರದು' ಎಂದು ರಾಮ ಲಲ್ಲಾ ವಿರಾಜಮಾನ್ ಪರ ವಕೀಲಸಿ.ಎಸ್.ವೈದ್ಯನಾಥನ್ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ತಿಳಿಸಿದರು.
ಕ್ರಿ.ಶ.1608 ಮತ್ತು 1611ರ ನಡುವೆ ಭಾರತಕ್ಕೆ ಭೇಟಿ ನೀಡಿದ್ದ ಇಂಗ್ಲಿಷ್ ವ್ಯಾಪಾರಿ ವಿಲಿಯಂ ಫಿಂಚ್ ಬರೆದಿರುವ ಪ್ರವಾಸ ಕಥನವನ್ನು ಪ್ರಸ್ತಾಪಿಸಿದ ವೈದ್ಯನಾಥನ್, 'ಅಯೋಧ್ಯೆಯಲ್ಲಿ ಕೋಟೆ ಇತ್ತು ಮತ್ತು ಭಗವಾನ ರಾಮ ಅಲ್ಲಿ ಜನಿಸಿದ್ದ ಎನ್ನುವುದು ಹಿಂದೂಗಳ ನಂಬಿಕೆ' ಎಂದು ಪ್ರತಿಪಾದಿಸಿದರು.
ಬ್ರಿಟಿಷ್ ಸರ್ವೇಯರ್ ಮೊಂಟ್‌ಗೊಮೆರಿ ಮಾರ್ಟಿನ್ ಮತ್ತು ಜೆಸೂಟ್ ಮಿಷನರಿ ಜೋಸೆಫ್ ಟಿಫೆನ್‌ಥಾಲೆರ್ ಅವರ ಪ್ರವಾಸ ಕಥನಗಳನ್ನು ಸಹ ಅವರು ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.