ಮಹಾರಾಷ್ಟ್ರ:ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದಿದ್ದ ಬೆಳೆಯಲ್ಲಾ ನಾಶವಾಗಿದೆ. ಇದರಿಂದಾಗಿ ರೈತರಿಗೆ ಭಾರಿ ನಷ್ಟವುಂಟಾಗಿದ್ದು ಸಹಾಯಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡನವೀಸ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಈ ಕುರಿತು ಚರ್ಚೆ ನಡೆಸಿದ ಫಡನವೀಸ್, ಮಹಾರಾಷ್ಟ್ರದಲ್ಲಿ ಅಕಾಲಿಕ, ಭಾರಿ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.
ಅಲ್ಲದೆ ಬೆಳೆಗೆ ಹಾನಿ ಸಂಭವಿಸಿದೆ. ಈ ಸಂಬಂಧ ನಾನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಕರೆದು ವಿಷಯ ಕುರಿತು ಚರ್ಚಿಸಿದ್ದೇನೆ. ಇದಲ್ಲದೆ, ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದೇನೆ ಎಂದಿದ್ದಾರೆ.
ಮಳೆಯಿಂದಾದ ನಷ್ಟವನ್ನು ರೈತರಿಗೆ ತುಂಬಲು ದಾಖಲೆ ಸಿದ್ಧಪಡಿಸಬೇಕು. ಪರಿಸ್ಥಿತಿ ಸೂಕ್ಷ್ಮತೆಯನ್ನು ವಿಮಾ ಕಂಪನಿಗಳಿಗೆ ತಿಳಿಸಬೇಕು. ವಿಮಾ ಕಂಪನಿಗಳಿಗೆ ಸಾಧ್ಯವಾಗುವುದಿಲ್ಲ ಎಂದರೆ ಸರ್ಕಾರಿ ಆಡಳಿತ ಅಲ್ಲಿಗೆ ತಲುಪಿ ನಷ್ಟದ ಕುರಿತು ಮೌಲ್ಯ ಮಾಪನ ನಡೆಸಬೇಕು ಎಂದಿದ್ದಾರೆ.
ಒಂದು ವೇಳೆ ಸರಿಯಾದ ಸಮಯಕ್ಕೆ ಸರ್ಕಾರದ ಪ್ರಾಧಿಕಾರಗಳು ನಷ್ಟ ಸಂಭವಿಸಿದ ಗ್ರಾಮಗಳಿಗೆ ತಲುಪಲು ಸಾಧ್ಯವಾಗುವುದಿಲ್ಲ ಎಂದರೆ ಗ್ರಾಮಸ್ಥರು ನಷ್ಟ ಉಂಟಾದ ಸ್ಥಳದ ಫೋಟೋಗಳನ್ನು ತೆಗೆದು ಅಪ್ ಲೋಡ್ ಮಾಡಿದರೆ ಸಾಕು ಅದನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗುವುದು ಎಂದಿದ್ದಾರೆ.
ಇದರಿಂದಾಗಿ ಸಂಬಂಧಪಟ್ಟ ಆಡಳಿತಾಧಿಕಾರಿಗಳು ಮತ್ತು ಪ್ರಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ಕು ಅತಿದೊಡ್ಡ ಚಂಡಮಾರುತಗಳು ಬೀಸಿವೆ. ಕೈರ್ ಚಂಡಮಾರುತದಿಂದಾಗಿ ಎರಡು ವಾರಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ. ಲಕ್ಷಗಟ್ಟಲೆ ಹೆಕ್ಟೇರ್ ಜಮೀನು ಹಾಳಾಗಿದೆ.
ಪ್ರಸ್ತುತ ಸಮಸ್ಯೆಗಳನ್ನು ಕುರಿತು ಚರ್ಚಿಸಲು ನಾಳೆ ಸಂಪುಟ ಉಪ ಸಮಿತಿಯ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.