ADVERTISEMENT

ಮುಖ್ಯಮಂತ್ರಿಯಿಂದಲೇ ಮರಣ ಶಾಸನ: ದಿನ ಎಣಿಸುತ್ತಿದೆ ತೆಲಂಗಾಣ ಸಾರಿಗೆ ನಿಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2019, 7:12 IST
Last Updated 25 ಅಕ್ಟೋಬರ್ 2019, 7:12 IST
ಹೈದರಾಬಾದ್‌ನಲ್ಲಿ ಅ.14ರಂದು ಆತ್ಮಹತ್ಯೆ ಮಾಡಿಕೊಂಡ ತೆಲಂಗಾಣ ಸಾರಿಗೆ ನಿಗಮದ ನಿರ್ವಾಹಕ ಸುರೇಂದರ್ ಗೌಡ್ ಅವರ ಕುಟುಂಬದ ಸದಸ್ಯರ ರೋದನ (ಎಡಚಿತ್ರ). ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್
ಹೈದರಾಬಾದ್‌ನಲ್ಲಿ ಅ.14ರಂದು ಆತ್ಮಹತ್ಯೆ ಮಾಡಿಕೊಂಡ ತೆಲಂಗಾಣ ಸಾರಿಗೆ ನಿಗಮದ ನಿರ್ವಾಹಕ ಸುರೇಂದರ್ ಗೌಡ್ ಅವರ ಕುಟುಂಬದ ಸದಸ್ಯರ ರೋದನ (ಎಡಚಿತ್ರ). ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್   

ಮುಷ್ಕರ ನಡೆಸಿ ಸರ್ಕಾರವನ್ನು ಬಗ್ಗಿಸಬಹುದು, ತಮ್ಮ ಬೇಡಿಕೆಗಳತ್ತ ಜನರ ಗಮನ ಸೆಳೆಯಬಹುದು ಎಂದುಕೊಂಡಿದ್ದ ತೆಲಂಗಾಣ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ)ನೌಕರರು ಸರ್ಕಾರದ ಬಿಗಿ ನಿಲುವಿನಿಂದ ಕಂಗಾಲಾಗಿದ್ದಾರೆ. ಮುಂದೇನು ಎನ್ನುವ ಉತ್ತರವಿಲ್ಲದ ಪ್ರಶ್ನೆಗೆ ಮುಖಾಮುಖಿಯಾಗಲಾರದೆ ಅವರ ಕುಟುಂಬಗಳು ಕಳಾಹೀನವಾಗಿವೆ.

‘ಲಾಭ ಮಾಡದ ಸಾರಿಗೆ ನಿಗಮ ಇದ್ದರೆಷ್ಟು, ಹೋದರೆಷ್ಟು’ ಎನ್ನುವ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್‌ ಅವರ ಮಾತುಗಳು ಅವರ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ‘ನೂರೆಂಟು ತೆರಿಗೆಗಳು, ಸಾಮಾಜಿಕ ಯೋಜನೆಗಳು, ಅವರಿವರ ಭಷ್ಟಾಚಾರಕ್ಕೆ ಸಂಸ್ಥೆಯ ಹಿತ ಬಲಿಕೊಟ್ಟು, ಈಗ ನಮ್ಮನ್ನೇ ದೂರುತ್ತಿದ್ದೀರಿ’ ಎನ್ನುವ ಕಾರ್ಮಿಕರ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

ನಿಗಮದ ಭವಿಷ್ಯ ಮಂಕಾಗಿಸಿದ ಉಪಚುನಾವಣೆ ಫಲಿತಾಂಶ

ಮುಷ್ಕರ ನಡೆಸುತ್ತಿರುವ ತೆಲಂಗಾಣ ಸಾರಿಗೆ ನಿಗಮದ ನೌಕರರ ಪರವಾಗಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಇತರ ಕಾರ್ಮಿಕರ ರೂಪಿಸಿಕೊಂಡಿದ್ದ ಜಂಟಿ ಕ್ರಿಯಾ ಸಮಿತಿಗೆ ತೆಲಂಗಾಣದ ಹುಜೂರ್‌ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಆರ್‌ಎಸ್ ಸೋಲಬಹುದು ಎಂಬ ನಿರೀಕ್ಷೆ ಇತ್ತು.

ಆದರೆ ಶುಕ್ರವಾರ ಪ್ರಕಟವಾದ ಹುಜೂರ್‌ನಗರ ಉಪ ಚುನಾವಣೆಯಲ್ಲಿ ತೆಲಂಗಾಣ ಭರ್ಜರಿ 43 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿತು. ಇದು ಟಿಆರ್‌ಎಸ್‌ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ಅವರ ಹಟಮಾರಿ ಧೋರಣೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

ಉಪಚುನಾವಣೆ ಗೆಲುವು ಘೋಷಣೆಯಾದ ನಂತರ ಹೈದರಾಬಾದ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಕೆ.ಚಂದ್ರಶೇಖರ್‌ ರಾವ್‌ ‘ಟಿಎಸ್‌ಆರ್‌ಟಿಸಿಯನ್ನು ಉಳಿಸಿಕೊಳ್ಳುವ ಅಥವಾ ನೌಕರರ ಬದುಕಿಗೆ ಕಾಯಕಲ್ಪ ನೀಡುವ ಯಾವ ಆಸಕ್ತಿಯೂ ನನಗಿಲ್ಲ. ಲಾಭ ಮಾಡದ ನಿಗಮ ಇದ್ದರೆಷ್ಟು, ಹೋದರೆಷ್ಟು’ ಎಂದು ತಮ್ಮ ಮನದಮಾತು ಆಡಿಬಿಟ್ಟರು.

‘ಸಾರಿಗೆ ನಿಗಮದ 48 ಸಾವಿರ ಸಿಬ್ಬಂದಿಯ ಜೊತೆಗೆ ಮಾತುಕತೆ ನಡೆಸುವ ಅಥವಾ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಯಾವ ಆಲೋಚನೆಯೂ ನನಗಾಗಲೀ, ನನ್ನ ಸರ್ಕಾರಕ್ಕಾಗಲಿ ಇಲ್ಲ’ ಎಂದು ಸ್ಪಷ್ಟವಾಗಿ ನುಡಿದರು.

ತೆಲಂಗಾಣ ಮುಖ್ಯಮಂತ್ರಿ, ಟಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್‌ ರಾವ್

ದುಬಾರಿಯಾಗಿದೆ ಆರ್ಥಿಕ ಹಿಂಜರಿತ

‘ತೆಲಂಗಾಣ ಜನರಿಗೆ ದಸರಾ ಮುಖ್ಯ ಹಬ್ಬ. ಇಂಥ ಸಂದರ್ಭದಲ್ಲಿ ಮುಷ್ಕರ ಮಾಡಲು ಹೊರಟಿದ್ದು ಟಿಎಸ್‌ಆರ್‌ಟಿಸಿ ಸಿಬ್ಬಂದಿ ತೆಗೆದುಕೊಂಡ ಮೂರ್ಖತನದ ನಿರ್ಧಾರ. ಮೊದಲೇ ಆರ್ಥಿಕ ಹಿಂಜರಿತದಿಂದ ದೇಶದಲ್ಲಿ ಮಂಕುಕವಿದ ವಾತಾವರಣವಿದೆ. ತೆಲಂಗಾಣ ಸಹ ಇದಕ್ಕೆ ಹೊರತಾಗಿಲ್ಲ. ಈ ಬಾರಿ ನಾನು ಸಹ ನೀರಸ ಬಜೆಟ್ ಕೊಡಬೇಕಾಗಿದೆ. ಮುಷ್ಕರಕ್ಕೆ ಮುಂದಾಗುವ ಮೊದಲು ಕಾರ್ಮಿಕ ಸಂಘಟನೆಗಳು ಈ ವಿಚಾರವನ್ನು ಆಲೋಚಿಸಬೇಕಿತ್ತು’ ಎಂದು ಅವರು ಹೇಳಿದರು.

‘ನಾವು ಅಧಿಕಾರಕ್ಕೆ ಬಂದ ನಂತರ, ಕಳೆದ ಐದು ವರ್ಷಗಳಲ್ಲಿ ಸಾರಿಗೆ ನಿಗಮ ನೌಕರರ ಸಂಬಳವನ್ನು ಶೇ 67ರಷ್ಟು ಹೆಚ್ಚಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ನೀಡುವ ಆರ್ಥಿಕ ಸಹಾಯವನ್ನು ಶೇ 597ರಷ್ಟು ಹೆಚ್ಚಿಸಿದ್ದೇನೆ. ಇದರ ಮೊತ್ತ ಪ್ರತಿವರ್ಷಕ್ಕೆ ಸುಮಾರು ₹ 900 ಕೋಟಿಯಷ್ಟಾಗುತ್ತೆ. ನಿಗಮಕ್ಕೆ ₹ 5000 ಕೋಟಿಯಷ್ಟು ಸಾಲಗಳಿವೆ. ಪ್ರತಿ ತಿಂಗಳು ಬಡ್ಡಿ ಪಾವತಿಸದಿದ್ದರೂ ನಿಗಮ ದಿವಾಳಿಯಾಗುತ್ತೆ. ಇಷ್ಟು ಸಾಲದೆಂಬಂತೆ ಪ್ರತಿ ತಿಂಗಳು ₹ 100 ಕೋಟಿ ನಷ್ಟವಾಗುತ್ತಿದೆ’ ಎಂದು ಕೆಸಿಆರ್‌ ಆಂಕಿಅಂಶ ತೆರೆದಿಟ್ಟರು.

ಸಾರಿಗೆ ನಿಗಮದ ನೌಕರರಿಗೆ ಕಾರ್ಮಿಕ ಸಂಘಟನೆಗಳ ನಾಯಕರು ಸತ್ಯ ಹೇಳದೇ ಮೋಸ ಮಾಡಿದ್ದಾರೆ. ನವರಾತ್ರಿಗಾಗಿ ಮನೆಗಳಿಗೆ ಜನರು ಬರುತ್ತಿದ್ದ ಸಮಯದಲ್ಲಿ ಸಾರಿಗೆ ನಿಗಮದ ಆದಾಯ ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಅದೇ ಸಮಯದಲ್ಲಿ ಮುಷ್ಕರ ಆರಂಭಿಸಿದ ಕಾರ್ಮಿಕರು ರಾಜಕೀಯ ಪಕ್ಷಗಳು ಹೆಣೆದ ಉರುಳಿಗೆ ತಲೆಕೊಟ್ಟರು ಎಂದು ಕೆಸಿಆರ್‌ ಬೇಸರ ವ್ಯಕ್ತಪಡಿಸಿದರು.

‘ನಷ್ಟದಲ್ಲಿ ಮುಳುಗಿರುವ ನಿಗಮದ ನೌಕರರ ಸಂಬಳ ಹೆಚ್ಚಿಸುವುದಾದರೂ ಹೇಗೆ?’ ಎನ್ನುವುದು ಮುಖ್ಯಮಂತ್ರಿ ಕೇಳಿದ ಪ್ರಶ್ನೆ.

ಸರ್ಕಾರದೊಂದಿಗೆ ವಿಲೀನ ಅಸಾಧ್ಯ

‘ಸಾರಿಗೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವ ಕುರಿತಂತೆ ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ. ಸರ್ಕಾರದ ಬಳಿ ಸಾರಿಗೆ ನಿಗಮದಂಥ 58ಕ್ಕೂ ಹೆಚ್ಚು ಸಂಸ್ಥೆಗಳಿವೆ. ಅವುಗಳೆಲ್ಲದರ ಅಭ್ಯುದಯಕ್ಕೆ ನಾವು ಗಮನಕೊಡಬೇಕಿದೆ. ಸಾರಿಗೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಎನ್ನುವ ಬೇಡಿಕೆಯೇ ತರ್ಕಹೀನವಾದುದು ಮತ್ತು ಮೂರ್ಖತನದ್ದು’ ಎಂದು ಕೆಸಿಆರ್ ಹೇಳಿದರು.

ಮುಷ್ಕರವಲ್ಲ, ನಿಗಮವೇ ನಿಲ್ಲುತ್ತೆ…

ತೆಲಂಗಾಣ ಸಾರಿಗೆ ನಿಗಮದ ನೌಕರರು ಮುಷ್ಕರ ಹಿಂಪಡೆದರೂ ಸರಿ, ಬಿಟ್ಟರೂ ಸರಿ. ಸಾರಿಗೆ ನಿಗಮ ಸ್ಥಗಿತಗೊಳ್ಳುವುದು ಖಚಿತ ಎನ್ನುವುದು ಕೆಸಿಆರ್‌ ಅವರ ಕಟುನುಡಿ. ರಾಜ್ಯದೊಳಗೆ ಮತ್ತು ಅಂತರರಾಜ್ಯ ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸಲು ಖಾಸಗಿ ಸಂಸ್ಥೆಗಳಿಗೆ ಶೀಘ್ರ ಅನುಮತಿ ನೀಡಲಾಗುವುದು ಎಂದು ಇದೇ ಸಂದರ್ಭ ಕೆಸಿಆರ್ ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೂ ಇದೆ ಪಾಠ

ಟಿಎಸ್‌ಆರ್‌ಟಿಸಿ ನೌಕರರ ಮುಷ್ಕರ, ಮುಖ್ಯಮಂತ್ರಿಯ ಬಿಗಿ ನಿಲುವುಮತ್ತು ನಂತರದ ಬೆಳವಣಿಗೆಗಳು ಅಕ್ಕಪಕ್ಕದ ಸಾರಿಗೆ ನಿಗಮದ ಸಿಬ್ಬಂದಿ ಮೇಲೆಯೂ ಪರಿಣಾಮ ಬೀರಿದೆ.

‘ನಮ್ಮ ಡಿಪೊಚಾಲಕರು ಮತ್ತು ನಿರ್ವಾಹಕರೂ ಈಚೆಗೆ‘ನಾವೂ ತೆಲಂಗಾಣ ಮಾದರಿಯಲ್ಲಿ ಹೋರಾಟ ಮಾಡಬೇಕು’ ಎಂದು ಹೇಳುತ್ತಿದ್ದರು.ಆದರೆ ಈಗ ಅಲ್ಲಿನ ಮುಖ್ಯಮಂತ್ರಿ ಆಡುತ್ತಿರುವ ಮಾತು ಕೇಳಿದರೆ ಭಯವಾಗುತ್ತೆ.ಟಿಎಸ್‌ಆರ್‌ಟಿಸಿ ಮುಳುಗಿದರೆ ಅದು ಖಂಡಿತ ಅಕ್ಕಪಕ್ಕದ ರಾಜ್ಯಗಳ ಸಾರಿಗೆ ನಿಗಮಗಳ ಮೇಲೆಯೂ ಪರಿಣಾಮ ಬೀರುತ್ತೆ.ನೌಕರರ ಕುಟುಂಬಗಳ ಪರಿಸ್ಥಿತಿಯನ್ನು ನೆನಪಿಸಿಕೊಂಡರೇ ಬೇಸರವೂ ಆಗುತ್ತೆ.ಕಷ್ಟವೋ ಸುಖವೋ ಕೆಲಸ ಉಳಿದರೆ ಸಾಕು,ಸದ್ಯದ ಮಟ್ಟಿಗೆ ಬದುಕು ನಡೆದರೆ ಸಾಕು’ ಎಂದು ಬಿಎಂಟಿಸಿ ಬಸ್‌ನ ನಿರ್ವಾಹಕರೊಬ್ಬರು ಹೇಳಿದರು.

ಕೆಎಸ್‌ಆರ್‌ಟಿಸಿ ಸಮಸ್ಯೆ ಬಗ್ಗೆ ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.