ಮುಂಬೈ: ‘ಜೀವನದ ಕುರಿತು ಭರವಸೆಯನ್ನೇ ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಬದುಕಿರುವುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’. ಹೀಗೆಂದು ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ವಿಶೇಷ ನ್ಯಾಯಾಲಯವೊಂದರಲ್ಲಿ ಹೇಳಿದರು.
ಕೆನರಾ ಬ್ಯಾಂಕ್‌ಗೆ ₹538 ಕೋಟಿ ವಂಚಿಸಿದ ಆರೋಪ ಮೇಲೆ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 1ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತ್ತು.
ಗೋಯಲ್ ಅವರು ಸದ್ಯ ಮುಂಬೈನ ಆರ್ಥರ್ ಜೈಲಿನಲ್ಲಿ ನ್ಯಾಯಾಂಗ ವಶದಲ್ಲಿರುವ ಅವರು, ಕಳೆದ ತಿಂಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗಾಗಿ ಅವರನ್ನು ವಿಶೇಷ ನ್ಯಾಯಾಲಯದಲ್ಲಿ ಶನಿವಾರ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರ ಎದುರು ಕೈಕಟ್ಟಿ ದುಃಖತಪ್ತರಾಗಿ ಮಾತನಾಡಿದ ಅವರು, ತಮ್ಮ ಆರೋಗ್ಯ ಸ್ಥಿರವಾಗಿಲ್ಲ. ಪತ್ನಿಯು ಅಂತಿಮ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಏಕೈಕ ಮಗಳೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಮಗೆ ಸಹಾಯ ಮಾಡಲು ಜೈಲಿನ ಸಿಬ್ಬಂದಿಗೆ ಮಿತಿಗಳಿವೆ ಎಂದು ಹೇಳಿದರು.
‘ಆರೋಗ್ಯ ತಪಾಸಣೆಗಾಗಿ ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಗೆ ಹೋಗಿ ದೀರ್ಘ ಅವಧಿಗೆ ಸರದಿಯಲ್ಲಿ ಕಾದುನಿಲ್ಲಲು ಕೂಡಾ ನನ್ನಲ್ಲಿ ಶಕ್ತಿ ಇಲ್ಲ. ತಪಾಸಣೆಗಾಗಿ ಪದೇಪದೆ ಆಸ್ಪತ್ರೆಗೆ ಹೋಗುವುದು ದುಸ್ತರ. ಜೆಜೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಜೈಲಿನಲ್ಲೇ ಸಾಯಲು ಬಿಡಿ’ ಎಂದು ಹೇಳಿದರು.
ಗೋಯಲ್ ಅವರ ನಿವೇದನೆ ಆಲಿಸಿದ ಬಳಿಕ ಮಾತನಾಡಿದ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು, ‘ನಾನು ಗೋಯಲ್ ಅವರ ಮತುಗಳನ್ನು ತಾಳ್ಮೆಯಿಂದ ಆಲಿಸಿದೆ. ಮಾತನಾಡುವಾಗ ಅವರ ಸಂಪೂರ್ಣ ದೇಹ ನಡುಗುತ್ತಿತ್ತು. ನಿಂತುಕೊಳ್ಳಲು ಅವರಿಗೆ ಸಹಾಯ ಬೇಕು. ಅವರಿಗೆ ಕಾಲು ಮಡಚಲೂ ಸಾಧ್ಯವಿಲ್ಲ’ ಎಂದರು.
ಗೋಯಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಇ.ಡಿ ಪ್ರತಿಕ್ರಿಯೆ ನೀಡಿದೆ. ಮುಂದಿನ ವಿಚಾರಣೆಯನ್ನು ಜನವರಿ 16ಕ್ಕೆ ನ್ಯಾಯಾಲಯ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.