ನವದೆಹಲಿ: ‘ಪ್ರತಿಭಟನನಿರತ ರೈತರ ಮೇಲೆ ಬಿಜೆಪಿ ತೋರಿದ ನಿರಾಸಕ್ತಿಯು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಈ ಬಾರಿ ‘ದನದ ಹೆಸರಿನಲ್ಲಿ ಬೆದರಿಕೆ’, ‘ಲವ್ ಜಿಹಾದ್’ನಂತಹ ಬಿಜೆಪಿಯ ಕೃತಕ ವಿಷಯಗಳು ಉಪಯೋಗಕ್ಕೆ ಬರುವುದಿಲ್ಲ’ ಎಂದು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು ವಾಗ್ದಾಳಿ ನಡೆಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಜಯಂತ್ ಚೌಧರಿ,‘ ಈ ಬಾರಿ ಕೋಮು ಧ್ರುವೀಕೃತ ಅಭಿಯಾನಗಳ ಮೂಲಕ ರಾಜ್ಯವನ್ನು ಹಾಳು ಮಾಡಲು ನಾವು ಬಿಡುವುದಿಲ್ಲ. ನಮ್ಮ ಪಕ್ಷ ಮತ್ತು ಸಮಾಜವಾದಿ ಪಕ್ಷ ಉತ್ತಮ ಸಂಬಂಧವನ್ನು ಹೊಂದಿದೆ. ಈ ಸಂಬಂಧವನ್ನು ನಾವು ಇನ್ನಷ್ಟು ಸದೃಢಗೊಳಿಸಲಿದ್ದೇವೆ’ ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಬಿಎಸ್‌ಪಿಯೊಂದಿಗೆ ಸೇರಿ ‘ಮಹಾಮೈತ್ರಿ’ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ ಮೈತ್ರಿಗೆ ಪಕ್ಷಗಳ ನಡುವೆ ಒಮ್ಮತ ಅಭಿಪ್ರಾಯ ಇರಬೇಕು. ಹಾಗಾಗಿ ಯಾವ ಪಕ್ಷಗಳು ಜತೆಯಾಗಿ ಕೆಲಸ ಮಾಡಲು ಸಿದ್ಧವಿದೆ ಎಂಬುದನ್ನು ಮೊದಲ ನೋಡಬೇಕಾಗಿದೆ’ ಎಂದರು.
ಸಂಪುಟ ಪುನರ್ ರಚನೆ ಮತ್ತು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚೌಧರಿ,‘ ಬಿಜೆಪಿ ಈ ಮೂಲಕ ಕೇವಲ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶ ಸರ್ಕಾರವು ಕೋವಿಡ್ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಲ್ಲ. ಅಲ್ಲದೆ ಗಂಗಾ ನದಿಯಲ್ಲಿ ತೇಲಿ ಬಂದ ಶವಗಳ ಬಗ್ಗೆ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಈಗ ಬಿಜೆಪಿಯು ನಾಯಕತ್ವ ಬದಲಾವಣೆಯ ಹೆಸರಿನಲ್ಲಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ’ ಎಂದರು.
‘ಬಿಜೆಪಿಯು ರೈತರ ಪ್ರತಿಭಟನೆಗೆ ಸ್ಪಂದಿಸಿಲ್ಲ. ಪ್ರತಿಭಟನಾ ನಿರತ ರೈತರ ಮೇಲೆ ಬಿಜೆಪಿ ತೋರಿದ ನಿರಾಸಕ್ತಿಯು ಪಕ್ಷವನ್ನು ಮುಂದಿನ ದಿನಗಳಲ್ಲಿ ಕಾಡಲಿದೆ. ಈ ಬಾರಿ ಲವ್ ಜಿಹಾದ್‌ನಂತಹ ಕೃತಕ ವಿಷಯಗಳು ಬಿಜೆಪಿಗೆ ನೆರವಾಗುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನೈಜ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನರು ಪ್ರಶ್ನಿಸಲಿದ್ದಾರೆ’ ಎಂದು ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.