‘ತಮ್ಮ ನಿಜವಾದ ಹೆಸರು ಹಾಗೂ ಗುರುತನ್ನು ಮರೆಮಾಚಿ, ನಮ್ಮ ಪುತ್ರಿಯರು ಮತ್ತು ಸಹೋದರಿಯರ ಘನತೆ– ಗೌರವಕ್ಕೆ ಧಕ್ಕೆ ಉಂಟುಮಾಡುವವರಿಗೆ ಇದೊಂದು ಎಚ್ಚರಿಕೆ; ನಾವು ಬಲಿಷ್ಠ ಕಾನೂನು ರೂಪಿಸಲಿದ್ದೇವೆ. ಇಂಥವರು ತಮ್ಮ ಹಾದಿಯನ್ನು ಬದಲಿಸದಿದ್ದರೆ ಅವರ ‘ಅಂತಿಮ ಯಾತ್ರೆ’ ಆರಂಭವಾಗಲಿದೆ...’
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಳೆದ ವಾರ ಜಾನ್ಪುರ್ ಮತ್ತು ದೇವರಿಯಾದಲ್ಲಿ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ ಈ ಮಾತು ಹೇಳಿದ್ದರು. ಆ ಮೂಲಕ ಹಿಂದೂ ಸ್ತ್ರೀಯರನ್ನು ಮತಾಂತರ ಗೊಳಿಸಿ, ಮದುವೆಯಾಗುವ ಮುಸ್ಲಿಮರ ವಿರುದ್ಧ ಪರೋಕ್ಷವಾಗಿ ಗುಡುಗಿದ್ದರು. ಇಂಥ ಅಂತರ ಧರ್ಮೀಯ ವಿವಾಹಗಳನ್ನು ಬಿಜೆಪಿ ಹಾಗೂ ಅದರ ಬೆಂಬಲಿಗ ಸಂಘಟನೆಗಳು ‘ಲವ್ ಜಿಹಾದ್’ ಎಂದು ಹೇಳುತ್ತಾ ಬಂದಿವೆ. ಯೋಗಿ ಅವರ ಈ ಹೇಳಿಕೆಯ ನಂತರ ‘ಮದುವೆಗಾಗಿ ಮತಾಂತರ’ದ ಚರ್ಚೆ ಮುನ್ನೆಲೆಗೆ ಬಂದಿದೆ.
‘ನಾವು ಕಠಿಣ ಕಾನೂನನ್ನು ತರಲಿದ್ದೇವೆ, ‘ಲವ್ ಜಿಹಾದ್’ ನಡೆಸಿದವರ ಭಾವಚಿತ್ರಗಳಿರುವ ಪೋಸ್ಟರ್‌ಗಳನ್ನು ಪ್ರಮುಖ ರಸ್ತೆಗಳ ಪಕ್ಕ ಫಲಕಗಳಲ್ಲಿ ಹಾಕಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಉತ್ತರಪ್ರದೇಶ ಮಾತ್ರವಲ್ಲ, ಅಂತರ ಧರ್ಮೀಯ, ವಿಶೇಷವಾಗಿ ಹಿಂದೂ ಸ್ತ್ರೀ ಮತ್ತು ಮುಸ್ಲಿಂ ಪುರುಷರ ನಡುವಣ ವಿವಾಹವನ್ನು ತಡೆಯುವಂಥ ಕಾನೂನನ್ನು ರೂಪಿಸಲು ಬಿಜೆಪಿ ಆಡಳಿತದ ಇನ್ನೂ ಕೆಲವು ರಾಜ್ಯಗಳು ಮುಂದಾಗಿವೆ.
ಸುಮಾರು ಒಂದು ತಿಂಗಳ ಹಿಂದೆಯೇ ಇಂಥ ಕಾನೂನಿನ ಬಗ್ಗೆ ಮಾತನಾಡಿದ್ದ ಅಸ್ಸಾಂನ ಬಿಜೆಪಿ ಮುಖಂಡ ಹಿಮಂತ ವಿಶ್ವ ಶರ್ಮಾ, ‘2021ರಲ್ಲಿ ನಾವು ಪುನಃ ಅಧಿಕಾರಕ್ಕೆ ಬಂದರೆ, ‘ಲವ್ ಜಿಹಾದ್’ ವಿರುದ್ಧ ಹೋರಾಟ ಆರಂಭಿಸುತ್ತೇವೆ’ ಎಂದಿದ್ದರು.
‘ಅಸ್ಸಾಂನ ಮಣ್ಣಿನಲ್ಲಿ ನಾವು ‘ಲವ್ ಜಿಹಾದ್’ ವಿರುದ್ಧ ಹೋರಾಟ ಆರಂಭಿಸಬೇಕಾಗಿದೆ. ನಾವು ಪುನಃ ಅಧಿಕಾರಕ್ಕೆ ಬಂದರೆ, ಯಾವುದೇ ಯುವಕ ತನ್ನ ಧಾರ್ಮಿಕ ಪರಿಚಯವನ್ನು ಮರೆಮಾಚಿ, ಅಸ್ಸಾಂನ ಪುತ್ರಿಯರು ಮತ್ತು ಮಹಿಳೆಯರ ಬಗ್ಗೆ ಯಾವುದೇ ಹೇಳಿಕೆ ನೀಡಿದರೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ’ ಎಂದು ಅವರು ಪಕ್ಷದ ಮಹಿಳಾ ಮೋರ್ಚಾದ ಸಭೆಯೊಂದರಲ್ಲಿ ಹೇಳಿದ್ದರು.
ಹರಿಯಾಣದ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಸಹ ಕೆಲವು ದಿನಗಳ ಹಿಂದೆ ಇಂಥದ್ದೇ ಮಾತುಗಳನ್ನಾಡಿದ್ದರು. ಫರೀದಾಬಾದ್‌ನಲ್ಲಿ ನಡೆದ ವಿದ್ಯಾರ್ಥಿನಿಯೊಬ್ಬಳ ಹತ್ಯೆಯನ್ನು ಪ್ರಸ್ತಾಪಿಸಿ, ‘ಈ ಘಟನೆಯ ಹಿಂದೆ ‘ಲವ್ ಜಿಹಾದ್’ ಇರುವಂತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ಇಂಥ ಪ್ರಕರಣಗಳನ್ನು ತಪ್ಪಿಸುವ ಕ್ರಮಗಳ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ’ ಎನ್ನುವ ಮೂಲಕ, ‘ಕಾನೂನು ರೂಪಿಸುವ ಸಿದ್ಧತೆ ಆರಂಭವಾಗಿದೆ’ ಎಂಬ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ‘ಲವ್ ಜಿಹಾದ್’ ತಡೆಯಲು ಸರ್ಕಾರವು ಕಾನೂನುಬದ್ಧ ವ್ಯವಸ್ಥೆ ಮಾಡಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಸೋಮವಾರ ಹೇಳಿದ್ದಾರೆ. ಅಂತರ ಧರ್ಮೀಯ ವಿವಾಹವನ್ನು ತಡೆಯಲು ಕಾನೂನು ರೂಪಿಸುವುದಾಗಿ ಹೇಳಿದ ರಾಜ್ಯಗಳ ಸಾಲಿಗೆ ಇದು ಹೊಸ ಸೆರ್ಪಡೆಯಾಗಿದೆ.
‘ಪ್ರೀತಿಯ ಹೆಸರಿನಲ್ಲಿ ಜಿಹಾದ್‌ಗೆ ಅವಕಾಶವಿಲ್ಲ. ಇಂಥ ಕೃತ್ಯವನ್ನು ಯಾರೇ ಮಾಡಿದರೂ ಅವರನ್ನು ಸರಿದಾರಿಗೆ ತರಲಾಗುವುದು. ಇದಕ್ಕಾಗಿ ಕಾನೂನಿನ ವ್ಯವಸ್ಥೆ ರೂಪಿಸಲಾಗುವುದು’ ಎಂದು ಅವರು ಮಾಧ್ಯಮದವರ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಕೋರ್ಟ್ ಹೇಳಿದ್ದೇನು?
ಅಂತರ ಧರ್ಮೀಯ ವಿವಾಹದ ವಿರುದ್ಧ ಗುಡುಗಲು ಯೋಗಿ ಆದಿತ್ಯನಾಥ ಅವರು ಅಲಹಾಬಾದ್ ಕೋರ್ಟ್‌ನ ಇತ್ತೀಚಿನ ಅಭಿಪ್ರಾಯವೊಂದರ ಆಸರೆ ಪಡೆದಿದ್ದಾರೆ. ಆದರೆ ಕೋರ್ಟ್‌ನ ಆದೇಶವನ್ನು ಯೋಗಿ ಅವರು ತಪ್ಪಾಗಿ ವಿಶ್ಲೇಷಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಹುಟ್ಟಿನಿಂದ ಮುಸ್ಲಿಂ ಆಗಿದ್ದ ಮಹಿಳೆಯೊಬ್ಬರು, 2020ರ ಜೂನ್ 29ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಜುಲೈ 31ರಂದು ಅವರು ಹಿಂದೂ ಸಂಪ್ರದಾಯದಂತೆ ಯುವಕನೊಬ್ಬನನ್ನು ವರಿಸಿದ್ದರು. ಇದಾದನಂತರ, ತಮಗೆ ವಿವಿಧ ಮೂಲಗಳಿಂದ ಒತ್ತಡಗಳು ಬರುತ್ತಿರುವುದರಿಂದ, ‘ನಮ್ಮ ವೈವಾಹಿಕ ಜೀವನದಲ್ಲಿ ಮಧ್ಯಪ್ರವೇಶ ಮಾಡದಂತೆ ಇತರರಿಗೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿ ಈ ಜೋಡಿಯು ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ‘ಮಹಿಳೆಯು ಮತಾಂತರಗೊಂಡು ಒಂದು ತಿಂಗಳಲ್ಲೇ ವಿವಾಹವಾಗಿದ್ದಾರೆ. ಇದನ್ನು ನೋಡಿದರೆ ವಿವಾಹದ ಉದ್ದೇಶದಿಂದಲೇ ಮತಾಂತರವಾದಂತೆ ಕಾಣಿಸುತ್ತಿದೆ’ ಎಂದು ಹೇಳಿತ್ತು.
ಯೋಗಿ ಅವರು ಈ ಆದೇಶವನ್ನು ಮುಂದಿಟ್ಟುಕೊಂಡು ಅಂತರ ಧರ್ಮೀಯ ವಿವಾಹವನ್ನು ನಿಷೇಧಿಸುವ ಕಾನೂನು ರೂಪಿಸಲು ಮುಂದಾಗಿದ್ದಾರೆ ಎಂದು ಟೀಕಿಸಲಾಗುತ್ತಿದೆ.
2014ರಲ್ಲಿ ಇದೇ ನ್ಯಾಯಾಲಯವು ‘ನೂರ್‌ಜಹಾನ್ ಬೇಗಂ–ಅಂಜಲಿ ಮಿಶ್ರಾ ಮತ್ತು ಉತ್ತರ ಪ್ರದೇಶ ಸರ್ಕಾರ’ಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಮುಂದಿಟ್ಟುಕೊಂಡು ಅಲಹಾಬಾದ್ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಅಂಜಲಿ ಮಿಶ್ರಾ ಎಂಬ ಮಹಿಳೆ ಇಸ್ಲಾಂಗೆ ಮತಾಂತರವಾಗಿ, ಕೆಲವೇ ದಿನಗಳಲ್ಲಿ ಮುಸ್ಲಿಂ ಯುವಕನನ್ನು ವರಿಸಿದ್ದರು. ಈ ಪ್ರಕರಣವೂ ನ್ಯಾಯಾಲಯದ ಮೆಟ್ಟಿಲೇರಿತ್ತು. 2014ರ ಡಿ.16ರಂದು ಈ ಬಗ್ಗೆ ಆದೇಶ ನೀಡಿದ್ದ ಅಲಹಾಬಾದ್ ಹೈಕೋರ್ಟ್, ‘ಇಸ್ಲಾಂ ಬಗ್ಗೆ ಯಾವುದೇ ಜ್ಞಾನವಿಲ್ಲದೆ, ಅದರ ಮೇಲೆ ನಂಬಿಕೆಯಿಲ್ಲದೆ, ಮುಸ್ಲಿಂ ಹುಡುಗನ ಒತ್ತಾಸೆಯಂತೆ ಬರಿಯ ವಿವಾಹದ ಉದ್ದೇಶಕ್ಕಾಗಿ ಮತಾಂತರ ಆಗುವುದು ಸ್ವೀಕಾರಾರ್ಹ ಅಲ್ಲ’ ಎಂದು ಕುರ್–ಆನ್‌ನ ಕೆಲವು ಸೂಕ್ತಿಗಳನ್ನು ಉಲ್ಲೇಖಿಸಿ ಆದೇಶ ನೀಡಿತ್ತು. ಈ ಆದೇಶವನ್ನೇ ಕೋರ್ಟ್ ಇತ್ತೀಚೆಗೆ ಪುನರುಚ್ಚರಿಸಿದೆ.
‘ಕಾನೂನಿನಲ್ಲಿ ವ್ಯಾಖ್ಯಾನ ಇಲ್ಲ’
‘ದೇಶದ ಯಾವುದೇ ಕಾನೂನಿನಲ್ಲಿ ‘ಲವ್ ಜಿಹಾದ್’ ಎಂಬುದನ್ನು ವ್ಯಾಖ್ಯಾನಿಸಿಲ್ಲ. ದೇಶದ ಯಾವುದೇ ತನಿಖಾ ಸಂಸ್ಥೆಯು ‘ಲವ್ ಜಿಹಾದ್’ ಎಂಬ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿಲ್ಲ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸಂಸತ್ತಿನಲ್ಲಿ ಹೇಳಿದ್ದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಫೆಬ್ರುವರಿ 4ರಂದು ನಡೆದ ಕಲಾಪದಲ್ಲಿ ಅವರು ಈ ಮಾಹಿತಿ ನೀಡಿದ್ದರು. ಕಾಂಗ್ರೆಸ್‌ನ ಬೆನ್ನಿ ಬೆಹನನ್ ಅವರು, ‘ತನಿಖಾ ಸಂಸ್ಥೆಗಳು ಹಿಂದಿನ ಎರಡು ವರ್ಷಗಳಲ್ಲಿ ಕೇರಳದಲ್ಲಿ ‘ಲವ್ ಜಿಹಾದ್’ ಅಡಿ ಪ್ರಕರಣ ದಾಖಲಿಸಿವೆಯೇ? ಅಂತಹ ಪ್ರಕರಣಗಳು ದಾಖಲಾಗಿದ್ದರೆ, ಅವುಗಳ ವಿವರ ನೀಡಿ’ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕಿಶನ್ ರೆಡ್ಡಿ ಅವರು ಲಿಖಿತ ಉತ್ತರ ನೀಡಿದ್ದರು.
‘ಸಂವಿಧಾನದ 25ನೇ ವಿಧಿಯು ಯಾವುದೇ ಧರ್ಮವನ್ನು ಹೊಂದುವ, ಆಚರಿಸುವ ಮತ್ತು ಆ ಧರ್ಮದ ಬಗ್ಗೆ ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಕಿಶನ್ ರೆಡ್ಡಿ ಅವರು ತಮ್ಮ ಲಿಖಿತ ಉತ್ತರದಲ್ಲಿ ವಿವರಿಸಿದ್ದರು. ‘ಕೇರಳದಲ್ಲಿನ ಎರಡು ಅಂತರಧರ್ಮೀಯ ಮದುವೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ’ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದ್ದರು.
ಆಧಾರ: ಪಿಟಿಐ
***
ಅಂತರ ಧರ್ಮೀಯ ವಿವಾಹಗಳಲ್ಲಿ ಕೇರಳದ ಹಾದಿಯಾ ಪ್ರಕರಣ ದೇಶದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕೋಟಯಂ ಜಿಲ್ಲೆಯ ವೈದ್ಯ ವಿದ್ಯಾರ್ಥಿನಿ ಅಖಿಲಾ ಎಂಬ ಯುವತಿಯನ್ನು ಶಫೀನ್ ಜಹಾನ್ ಎಂಬ ಮುಸ್ಲಿಂ ಯುವಕ ಮದುವೆಯಾಗಿದ್ದ. ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಖಿಲಾ ತನ್ನ ಹೆಸರನ್ನು ಹಾದಿಯಾ ಎಂದು ಬದಲಿಸಿಕೊಂಡರು. ಮದುವೆಗೆ ಹಾದಿಯಾ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಖಿಲಾ ಅವರ ತಂದೆ ಅಶೋಕನ್ ಅವರು ವಿವಾಹವನ್ನು ಪ್ರಶ್ನಿಸಿ, ಕೇರಳ ಹೈಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಕೋರ್ಟ್, ಹಾದಿಯಾ ಅವರನ್ನು ಹೆತ್ತವರಿಗೆ ಒಪ್ಪಿಸಿ ಆದೇಶಿಸಿತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಹಾದಿಯಾ ಹಾಗೂ ಶಫೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ತಾವು ಯಾರದೇ ಬಲವಂತದಿಂದ ಮದುವೆಯಾಗಿಲ್ಲ ಎಂದು ಹಾದಿಯಾ ವಾದಿಸಿದರು. ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಯುವತಿಗೆ ಇದೆ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಹಾದಿಯಾ–ಶಫೀನ್ ಮದುವೆಯನ್ನು ಊರ್ಜಿತಗೊಳಿಸಿತು. ಬಲವಂತದ ಮದುವೆಯ ಬಗ್ಗೆ ಪುರಾವೆಗಳು ಸಿಕ್ಕಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಹ ಹೇಳಿತು. ಹಾದಿಯಾ ತನ್ನ ಹೆತ್ತವರ ಮನೆಯಿಂದ ಗಂಡನ ಮನೆ ಸೇರಿದರು. ಈ ಮಧ್ಯೆ ತಮ್ಮ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿ, ಸ್ವಂತ ಕ್ಲಿನಿಕ್ ಕೂಡ ಶುರು ಮಾಡಿದರು. ಅಂತರ ಧರ್ಮೀಯ ವಿವಾಹದ ವಿರುದ್ಧ ಹೋರಾಟಕ್ಕೆ ಮುಂದಾದ ಹಾದಿಯಾ ತಂದೆ ಅಶೋಕನ್ ಅವರು ಬಿಜೆಪಿ ಸೇರ್ಪಡೆಯಾದರು.
ಕೇರಳವೊಂದರಲ್ಲೇ 89 ಅಂತರ್‌ಧರ್ಮೀಯ ವಿವಾಹಗಳು ನಡೆದಿವೆ ಎಂದು ಸರ್ಕಾರ ಗುರುತಿಸಿತು. ಈ ಪೈಕಿ 11 ಪ್ರಕರಣಗಳ ತನಿಖೆ ನಡೆಸಿದ ಎನ್‌ಐಎಗೆ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ. ಬಲವಂತದಿಂದ ಮತಾಂತರ ಆಗಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗದ ಕಾರಣ, ಪ್ರಕರಣಗಳನ್ನು ಸಮಾಪ್ತಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇತ್ತೀಚಿನ ಕೆಲವು ಪ್ರಕರಣಗಳು
ಮನೆ ಬಾಡಿಗೆ ಪಡೆಯುವ ಉದ್ದೇಶದಿಂದ ಮುಸ್ಲಿಂ ಯುವಕನೊಬ್ಬ ತನ್ನ ಹೆಸರನ್ನೇ ಬದಲಿಸಿಕೊಂಡಿದ್ದ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲದೆ, ಎರಡು ವರ್ಷಗಳಿಂದ ಮನೆ ಮಾಲೀಕನ ಮಗಳನ್ನು ಪ್ರೀತಿ ಮಾಡಿ, ಮದುವೆಯಾಗುವ ವಾಗ್ದಾನ ನೀಡಿದ್ದ. ಇತ್ತೀಚೆಗೆ ಆತನ ನಿಜವಾದ ಗುರುತು ಬಹಿರಂಗವಾಗಿದೆ ಎಂದು ನೌಬಸ್ತಾ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಆರ್ಯನ್ ಮಲ್ಹೋತ್ರಾ ಹಾಗೂ ಫತೇ ಖಾನ್ ಹೆಸರಿನಲ್ಲಿ ಎರಡು ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಆರ್ಯನ್ ಮಲ್ಹೋತ್ರಾ ಎಂಬುದು ನಕಲಿ ಗುರುತು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಅಕ್ಟೋಬರ್ 27ರಂದು ಹರಿಯಾಣದ ಫರೀದಾಬಾದ್‌ನಲ್ಲಿ 21 ವರ್ಷದ ನಿಖಿತಾ ತೋಮರ್ ಎಂಬ ಯುವತಿಯನ್ನು ಅಪಹರಿಸಲು ಯತ್ನಿಸಿದ ಇಬ್ಬರು ಯುವಕರು ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಹತ್ಯೆಗೆ ‘ಲವ್ ಜಿಹಾದ್’ ಕಾರಣ ಎಂದು ನಿಖಿತಾ ಪೋಷಕರು ಆರೋಪಿಸಿದ್ದರು. 2018ರಲ್ಲಿ ನಿಖಿತಾ ಹಿಂದೆ ಬಿದಿದ್ದ ತೌಸಿಫ್ ಎಂಬಾತ ರೆಹಾನ್ ಎಂಬುವನ ಜತೆಗೂಡಿ ಹತ್ಯೆ ಮಾಡಿದ್ದಾನೆ ಎಂದು ದೂರಿದ್ದರು. ‘ಲವ್ ಜಿಹಾದ್’ ತಡೆಗೆ ಸರ್ಕಾರ ಕಠಿಣ ಕಾನೂನು ತರಬೇಕು ಎಂದು ಬಾಬಾ ರಾಮದೇವ್ ಮತ್ತು ಕೆಲವು ರಾಜಕಾರಣಿಗಳು ಆಗ್ರಹಿಸಿದ್ದರು.
ಕಳೆದ ಜುಲೈನಲ್ಲಿ ಕಾನ್ಪುರದ ಶಾಲಿನಿ ಯಾದವ್ ಅವರು ಫೈಸಲ್ ಎಂಬ ಮುಸ್ಲಿಂ ಯುವಕನ್ನು ವಿವಾಹವಾಗಿದ್ದರು. ಇದು ‘ಲವ್ ಜಿಹಾದ್’ ಎಂದು ಶಾಲಿನಿ ಮನೆಯವರು ವಾದಿಸಿದರು. ಬಲವಂತದಿಂದ ಮತಾಂತರ ಆಗಿಲ್ಲ ಎಂದು ಶಾಲಿನಿ ಅವರು ದೆಹಲಿ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪ್ರಕಟಿಸಿದ್ದ ಅವರು, ಸ್ವಇಚ್ಛೆಯಂತೆ ಮತಾಂತರಗೊಂಡು ವಿವಾಹ ಆಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ಶಾಲಿನಿ ಅವರು ವಯಸ್ಕರಾಗಿರುವ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
ರೇಖಾ ಶರ್ಮಾ ವಜಾಕ್ಕೆ ಒತ್ತಾಯ
ರಾಷ್ಟ್ರೀಯ ಮಹಿಳಾ ಆಯೋಗದ ಆಧ್ಯಕ್ಷೆ ರೇಖಾ ಶರ್ಮಾ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ರಾಜ್ಯದಲ್ಲಿ ಅಂತರ ಧರ್ಮೀಯ ವಿವಾಹಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದರು. ಅವರು ‘ಲವ್ ಜಿಹಾದ್’ ಎಂಬ ಪದವನ್ನು ಪ್ರಯೋಗಿಸಿದ್ದರು. ರೇಖಾ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಯಿತು.
ಹಿಂದೂ ಮಹಿಳೆಯನ್ನು ಬಲವಂತದಿಂದ ಮುಸ್ಲಿಂ ಪುರುಷ ವಿವಾಹ ಆಗುವುದನ್ನು ‘ಲವ್ ಜಿಹಾದ್’ ಎಂಬುದಾಗಿ ಬಲಪಂಥೀಯ ಸಂಘಟನೆಗಳು ಕರೆಯುತ್ತವೆ. ‘ಒಂದು ಧರ್ಮವನ್ನು ಗುರಿಯಾಗಿಸಿ ಉಲ್ಲೇಖಿಸುವ 'ಲವ್ ಜಿಹಾದ್' ಎಂಬ ಪದವನ್ನು ರೇಖಾ ಶರ್ಮಾ ಅವರು ಬಳಸಿದ್ದು ನಿಜವಾಗಿಯೂ ಸಾಂವಿಧಾನಿಕವೇ’ ಎಂದು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದರು. ‘ಲವ್ ಜಿಹಾದ್’ ಪದದ ವ್ಯಾಖ್ಯಾನವೇನು? ನೀವು ಅದನ್ನು ಬಳಸುತ್ತೀರಿ ಎಂದಾದರೆ, ಆ ಪಂಥದ ಚಟುವಟಿಕೆಗಳನ್ನು (vigilantism) ಅನುಮೋದಿಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ. ರೇಖಾ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕು ಎಂಬ ಆಗ್ರಹವೂ ಕೇಳಿಬಂದಿತು.
ಸಿಟ್ಟಗೆದ್ದ ನೆಟ್ಟಿಗರು, ರಾಜಕಾರಣಿಗಳು ಹಾಗೂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಖಾ ಶರ್ಮಾ ಅವರ ಹಳೆಯ ಟ್ವೀಟ್‌ಗಳನ್ನು ಹೆಕ್ಕಿ ತೆಗೆದಿದ್ದರು. ತಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಶರ್ಮಾ ಪ್ರತಿಕ್ರಿಯೆ ನೀಡಿದರು. ತಾವು ಅಂತರ ಧರ್ಮೀಯ ವಿವಾಹದ ವಿರೋಧಿ ಅಲ್ಲ ಎಂದೂ ಸ್ಪಷ್ಟಪಡಿಸಿದ್ದರು.
‘ಬಾಲ್ಯ ವಿವಾಹದಿಂದ ಪರಿಹಾರ’
ಹುಡುಗಿಯರು ತಡವಾಗಿ ವಿವಾಹವಾಗುವುದೇ ‘ಲವ್ ಜಿಹಾದ್’ಗೆ ಕಾರಣ ಎಂದು ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಗೋಪಾಲ್ ಪರ್ಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದರಿಂದ ಇಂತಹ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.