ADVERTISEMENT

ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಸೃಷ್ಟಿ

ಪಿಟಿಐ
Published 20 ಅಕ್ಟೋಬರ್ 2023, 12:43 IST
Last Updated 20 ಅಕ್ಟೋಬರ್ 2023, 12:43 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಅಕ್ಟೋಬರ್‌ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪ್ರತಿಕೂಲ ವಾತಾವರಣ ಸೃಷ್ಟಿಗೆ ಕಾರಣವಾಗಲಿದೆ. ಈ ಚಂಡಮಾರುತಕ್ಕೆ ‘ತೇಜ್‌’ ಎಂದು ಹೆಸರಿಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಎರಡನೇ ಚಂಡಮಾರುತ ಇದಾಗಿದೆ ಎಂದು ವಿವರಿಸಿದೆ.

ಭಾನುವಾರದ ವೇಳೆಗೆ ತೀವ್ರತೆ ಪಡೆದುಕೊಳ್ಳುವ ಈ ಚಂಡಮಾರುತವು ಒಮನ್‌ ಹಾಗೂ ಅದಕ್ಕೆ ಹೊಂದಿಕೊಂಡ ಯೆಮನ್‌ನ ದಕ್ಷಿಣ ಕರಾವಳಿ ಪ್ರದೇಶಗಳತ್ತ ಚಲಿಸಲಿದೆ ಎಂದು ಹೇಳಿದೆ.

ADVERTISEMENT

ಜೂನ್‌ನಲ್ಲಿ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಬಿಪೋರ್‌ ಜಾಯ್‌ ಚಂಡಮಾರುತವು ಉತ್ತರ ಮತ್ತು ವಾಯವ್ಯ ಭಾಗದ ಕಡೆಗೆ ತನ್ನ ದಿಕ್ಕು ಬದಲಿಸುವುದಕ್ಕೂ ಮೊದಲು ಗುಜರಾತ್‌ನ ಮಾಂಡವಿ ಹಾಗೂ ಪಾಕಿಸ್ತಾನದ ಕರಾಚಿ ಭಾಗದಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿತ್ತು. ಹಾಗಾಗಿ, ‘ತೇಜ್‌’ ಕೂಡ ನಿರೀಕ್ಷಿತ ದಿಕ್ಕು ಬದಲಾಯಿಸಿ ವೇಗ ಪಡೆಯುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.‌‌

ಚಂಡಮಾರುತ ಸೃಷ್ಟಿಯಾದರೆ ಗಾಳಿಯ ವೇಗವು ಗಂಟೆಗೆ 62ರಿಂದ 88 ಕಿ.ಮೀ. ವೇಗದಲ್ಲಿ ಬೀಸಲಿದೆ. ಒಂದು ವೇಳೆ ತೀವ್ರತೆ ಪಡೆದರೆ ಗರಿಷ್ಠ 89ರಿಂದ 117 ಕಿ.ಮೀ. ವೇಗದಲ್ಲಿ ಬೀಸಲಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.