ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ₹100 ಇಳಿಕೆ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಹಿಳಾ ದಿನವಾದ ಶುಕ್ರವಾರ ಘೋಷಿಸಿದರು.
ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆಯನ್ನು ಇದು ಗಮನಾರ್ಹವಾಗಿ ತಗ್ಗಿಸಲಿದೆ ಮತ್ತು ನಾರಿ ಶಕ್ತಿಗೆ ಪ್ರಯೋಜನವಾಗಲಿದೆ ಎಂದು ಅವರು ‘ಎಕ್ಸ್’ ಮಾಧ್ಯಮದಲ್ಲಿ ಹೇಳಿದರು.
‘ಅಡುಗೆ ಅನಿಲ ಸಿಲಿಂಡರ್ ಇನ್ನಷ್ಟು ಕೈಗೆಟಕುವಂತೆ ಮಾಡುವ ಮೂಲಕ, ದೇಶದ ಕುಟುಂಬಗಳ ಯೋಗಕ್ಷೇಮಕ್ಕೆ ನೆರವು ನೀಡುವುದು ಮತ್ತು ಆರೋಗ್ಯಪೂರ್ಣ ಪರಿಸರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಮಹಿಳೆಯರ ಜೀವನವನ್ನು ಸರಳಗೊಳಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿ’ ಎಂದೂ ಬಣ್ಣಿಸಿದರು.
ಉಜ್ವಲ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ನೀಡುತ್ತಿರುವ ₹300 ಸಬ್ಸಿಡಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಣೆ ಮಾಡಿರುವುದಾಗಿ ಸರ್ಕಾರ ಗುರುವಾರ ಘೋಷಿಸಿತ್ತು.
ಟಿಎಂಸಿ ಟೀಕೆ: ಕೋಲ್ಕತ್ತ (ಪಿಟಿಐ): ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವುದಕ್ಕೆ ಟೀಕೆ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಈ ನಡೆಯು ‘ರಾಜಕೀಯ ಸಿನಿಕತನ’ದಿಂದ ಕೂಡಿದೆ ಎಂದು ಹೇಳಿದೆ. ಇದು ಅಗ್ಗದ ರಾಜಕೀಯ ತಂತ್ರಗಾರಿಕೆ ಎಂದೂ ಲೇವಡಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.