ADVERTISEMENT

Parliament Winter Session: ಅವಧಿಗೆ ಮೊದಲೇ ಅಧಿವೇಶನ ಅಂತ್ಯ

ಪಿಟಿಐ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ಲೋಕಸಭೆ ಕಲಾಪ</p></div>

ಲೋಕಸಭೆ ಕಲಾಪ

   

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಕೊನೆಗೊಂಡಿದ್ದು ಉಭಯ ಸದನಗಳ ಕಲಾಪವನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಬಾರಿಯ ಅಧಿವೇಶನವು ಗಂಭೀರ ಭದ್ರತಾ ಲೋಪ, 146 ಸಂಸದರ ಅಮಾನತು, ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣದಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯಂತಹ ಘಟನೆಗಳಿಗೆ ಸಾಕ್ಷಿಯಾಯಿತು.

ADVERTISEMENT

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲು ಮಾಡುವ ಮೂರು ಮಸೂದೆಗಳನ್ನು ರಾಜ್ಯಸಭೆ ಗುರುವಾರ ಅಂಗೀಕರಿಸಿತು. ಆ ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಚಳಿಗಾಲದ ಅಧಿವೇಶನವು ಇದೇ 4ರಂದು ಆರಂಭಗೊಂಡಿದ್ದು 22ರವರೆಗೆ (ಶುಕ್ರವಾರದವರೆಗೆ) ನಿಗದಿಯಾಗಿತ್ತು.

ಲೋಕಸಭೆಯಲ್ಲಿ ಗುರುವಾರ ಮತ್ತೆ ಮೂರು ಸಂಸದರನ್ನು ಅಮಾನತು ಮಾಡಲಾಗಿದ್ದು ಸಂಸತ್ತಿನ ಕೆಳಮನೆಯಲ್ಲಿ ಅಮಾನತುಗೊಂಡ ಸದಸ್ಯರ ಸಂಖ್ಯೆ ದಾಖಲೆಯ 100ಕ್ಕೆ ತಲುಪಿತು. ಲೋಕಸಭೆಯಲ್ಲಿ 97 ಸಂಸದರನ್ನು ಅಮಾನತು ಮಾಡಲಾಗಿದ್ದು, ಮೂವರನ್ನು ಹಕ್ಕುಬಾಧ್ಯತಾ ಸಮಿತಿ ವರದಿ ಸಲ್ಲಿಕೆಯಾಗುವವರೆಗೆ ಸದನದಿಂದ ಹೊರಹಾಕಲಾಗಿದೆ.

ಅನುಚಿತ ನಡವಳಿಕೆಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದರಾದ ಡಿ.ಕೆ. ಸುರೇಶ್‌, ದೀಪಕ್‌ ಬೈಜ್‌ ಮತ್ತು ನಕುಲ್‌ ನಾಥ್‌ ಅವರನ್ನು ಗುರುವಾರ ಅಮಾನತು ಮಾಡಲಾಯಿತು. ಸದನದಲ್ಲಿ ಪ್ರತಿಭಟನೆ ನಡೆಸುವುದರ ವಿರುದ್ಧ ಕಲಾಪದ ಆರಂಭದಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಈ ಮೂವರಿಗೆ ಎಚ್ಚರಿಕೆಯನ್ನೂ ನೀಡಿದ್ದರು.

ಸದನವು ಶೇ 74ರಷ್ಟು ಫಲಪ್ರದವಾಗಿದ್ದು ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದ ಕಾನೂನುಗಳು ಸೇರಿದಂತೆ 18 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದರು.

ಚಳಿಗಾಲದ ಅಧಿವೇಶನವು ಹೊಸ ಸಂಸತ್‌ ಕಟ್ಟಡದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆದ ಮೊದಲ ಅಧಿವೇಶನ ಎನಿಸಿತು.

ಇದೇ 13ರಂದು ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಚರ್ಚೆಗೆ ಒತ್ತಾಯಿಸಿದವು ಅಲ್ಲದೆ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕೆಂದು ಆಗ್ರಹಿಸಿದವು. ಒಟ್ಟು 14 ದಿನಗಳು ಕಲಾಪ ನಡೆದಿದ್ದು 61 ಗಂಟೆ 50 ನಿಮಿಷ ಸದನ ಕಾರ್ಯ ನಿರ್ವಹಿಸಿದೆ ಎಂದು ಕಲಾಪ ಮುಂದೂಡಿಕೆಗೆ ಮುನ್ನ ಮುಕ್ತಾಯ ಭಾಷಣದಲ್ಲಿ ಓಂ ಬಿರ್ಲಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.