ADVERTISEMENT

ಸದನದಿಂದ ಮಹುವಾ ಉಚ್ಚಾಟನೆಗೆ ನೀತಿ ಸಮಿತಿ ಶಿಫಾರಸು

ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದು ಟಿಎಂಸಿ ಸಂಸದೆ ವಿರುದ್ಧ ಆರೋಪ

ಪಿಟಿಐ
Published 9 ನವೆಂಬರ್ 2023, 15:48 IST
Last Updated 9 ನವೆಂಬರ್ 2023, 15:48 IST
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ   

ನವದೆಹಲಿ: ಪ್ರಶ್ನೆ ಕೇಳಲು ಹಣ ಪಡೆದ ಆರೋಪದ ಅಡಿಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ಲೋಕಸಭೆಯ ನೀತಿ ಸಮಿತಿಯು ಗುರುವಾರ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. 

ಲೋಕಸಭೆಯ ನೀತಿ ಸಮಿತಿಯು ಸಂಸದರೊಬ್ಬರನ್ನು ಸದನದಿಂದ ಹೊರಹಾಕುವಂತೆ ಶಿಫಾರಸು ಮಾಡಿರುವುದು ಇದೇ ಮೊದಲಿರಬೇಕು ಎಂದು ಲೋಕಸಭಾ ಸಚಿವಾಲಯದ ನಿವೃತ್ತ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಹೇಳಿದ್ದಾರೆ.

ಬಿಜೆಪಿಯ ಸಂಸದ ವಿನೋದ್ ಕುಮಾರ್ ಸೋನಕರ್ ನೇತೃತ್ವದ ನೀತಿ ಸಮಿತಿಯು ಗುರುವಾರ ಇಲ್ಲಿ ಸಭೆ ಸೇರಿ, ಮಹುವಾ ಅವರನ್ನು ಹೊರಹಾಕುವಂತೆ ಶಿಫಾರಸು ಮಾಡಿರುವ ವರದಿಯನ್ನು ಅಂಗೀಕರಿಸಿತು. ವರದಿಯ ಅಂಗೀಕಾರಕ್ಕೆ ನೀತಿ ಸಮಿತಿಯ ಆರು ಜನ ಸದಸ್ಯರು ಬೆಂಬಲ ಸೂಚಿಸಿದರು, ನಾಲ್ಕು ಮಂದಿ ವಿರೋಧಿಸಿದರು ಎಂದು ಸೋನಕರ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸಮಿತಿಯ ಶಿಫಾರಸು ‘ಪೂರ್ವಗ್ರಹಪೀಡಿತವಾಗಿದೆ’ ಮತ್ತು ‘ತಪ್ಪಾಗಿದೆ’ ಎಂದು ವಿರೋಧ ಪಕ್ಷಗಳ ಸದಸ್ಯರು ಆರೋಪಿಸಿದ್ದಾರೆ. ಕಾಂಗ್ರೆಸ್ ಸದಸ್ಯೆ ಪ್ರೆಣೀತ್ ಕೌರ್ ಅವರು ವರದಿಯ ಪರವಾಗಿ ಮತ ಚಲಾಯಿಸಿದರು ಎಂದು ಮೂಲಗಳು ಹೇಳಿವೆ.

ನೀತಿ ಸಮಿತಿಯು ಈ ಮೊದಲು ಮಹುವಾ ಅವರಿಂದ ಪ್ರತಿಕ್ರಿಯೆ ಪಡೆದಿತ್ತು. ಮಹುವಾ ಅವರ ವಿರುದ್ಧ ದೂರು ಸಲ್ಲಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಅನಂ‌ತ್ ದೇಹದ್ರಾಯ್ ಅವರೂ ಸಮಿತಿಯ ಮುಂದೆ ಹಾಜರಾಗಿದ್ದರು.

ದೇಹದ್ರಾಯ್ ಅವರು ನೀಡಿದ ಮಾಹಿತಿ ಆಧರಿಸಿ, ನಿಶಿಕಾಂತ್ ದುಬೆ ಅವರು ಮಹುವಾ ವಿರುದ್ಧ ಆರೋಪ ಹೊರಿಸಿದ್ದರು. ಮಹುವಾ ಅವರು ದರ್ಶನ್ ಹೀರಾನಂದಾನಿ ಎಂಬ ವಾಣಿಜ್ಯೋದ್ಯಮಿಯ ನಿರ್ದೇಶನಕ್ಕೆ ಅನುಸಾರವಾಗಿ, ಅವರಿಂದ ಉಡುಗೊರೆಗಳನ್ನು ಪಡೆದು ಅದಾನಿ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ದುಬೆ ಆರೋಪಿಸಿದ್ದರು.

ಹಣ ಪಡೆದ ಆರೋಪಗಳನ್ನು ಮಹುವಾ ಅವರು ಅಲ್ಲಗಳೆದಿದ್ದಾರೆ.

ವರದಿಯಲ್ಲಿ ಏನಿದೆ?: ಮಹುವಾ ಅವರು ತಮ್ಮ ಲೋಕಸಭಾ ಪೋರ್ಟಲ್‌ನ ಲಾಗಿನ್ ವಿವರಗಳನ್ನು ಹೀರಾನಂದಾನಿ ಜೊತೆ ಹಂಚಿಕೊಂಡಿದ್ದರು. ಹೀರಾನಂದಾನಿ ಅವರು ಯುಎಇಯಲ್ಲಿ ಇರುತ್ತಾರೆ. ಮಹುವಾ ಅವರ ಪೋರ್ಟಲ್‌ಅನ್ನು 2019ರಿಂದ 2023ರ ನಡುವಿನ ಅವಧಿಯಲ್ಲಿ ಯುಎಇಯಲ್ಲಿ 47 ಬಾರಿ ಬಳಕೆ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

ಲಾಗಿನ್ ವಿವರಗಳನ್ನು ಬೇರೆಯವರಿಗೆ ಕೊಡುವುದು ವ್ಯವಸ್ಥೆಯು ಗಂಭೀರವಾದ ಸೈಬರ್ ತಾಳಿಗೆ ತುತ್ತಾಗುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಇದು ಇಡೀ ಪೋರ್ಟಲ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ, ದೇಶದ ಸಂಸತ್ತಿನ ಚಟುವಟಿಕೆಗಳಿಗೆ ಗಂಭೀರ ಸ್ವರೂಪದ ಅಡ್ಡಿ ಉಂಟುಮಾಡಬಹುದು ಎಂದು ನೀತಿ ಸಮಿತಿಯ ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.

ಸೈಬರ್ ದಾಳಿಯನ್ನು ನಡೆಸುವವರು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಸಂಕಥನಗಳನ್ನು ಸೃಷ್ಟಿಸಿ ಸಂಸತ್ತಿನ ಪೋರ್ಟಲ್‌ನಲ್ಲಿ ಅವುಗಳನ್ನು ತೂರಿಸಿ, ದೇಶದ ಭದ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲರು ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಮಸೂದೆ 2019ಅನ್ನು ಪೋರ್ಟಲ್‌ನಲ್ಲಿ ಲಭ್ಯವಾಗಿಸಲಾಗಿತ್ತು. ಆದರೆ ಇದು ಸಾರ್ವಜನಿಕರಿಗೆ ಲಭ್ಯವಿರಲಿಲ್ಲ. ಇಂತಹ ಸೂಕ್ಷ್ಮ ಮಸೂದೆಗಳ ವಿವರಗಳು ಸೋರಿಕೆಯಾದಲ್ಲಿ ದೇಶದ ಭದ್ರತೆಗೆ ಅಪಾಯ ಒಡ್ಡಬಲ್ಲ ಶಕ್ತಿಗಳು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಮುಂದಿನ ಪ್ರಕ್ರಿಯೆ ಹೀಗಿರುತ್ತದೆ...

2005ರಲ್ಲಿ 11 ಮಂದಿ ಸಂಸದರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ಅದು ಕೂಡ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೇ ಸಂಬಂಧಿಸಿದ್ದಾಗಿತ್ತು. ಆದರೆ ಆಗ ರಾಜ್ಯಸಭೆಯ ನೀತಿ ಸಮಿತಿ ಹಾಗೂ ಲೋಕಸಭೆಯ ವಿಚಾರಣಾ ಸಮಿತಿಯ ಶಿಫಾರಸು ಆಧರಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಲೋಕಸಭೆ ನೀತಿ ಸಮಿತಿಯ ವರದಿಯನ್ನು ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಲಾಗುತ್ತದೆ. ವರದಿಯನ್ನು ಪ್ರಕಟಿಸುವಂತೆ ಸ್ಪೀಕರ್ ಆದೇಶಿಸಬಹುದು ಎಂದು ಪಿ.ಡಿ.ಟಿ. ಆಚಾರಿ ವಿವರಿಸಿದರು.

ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಸಮಿತಿಯ ಅಧ್ಯಕ್ಷ ವರದಿಯನ್ನು ಮಂಡಿಸಲಿದ್ದಾರೆ. ಅದಾದ ನಂತರದಲ್ಲಿ, ವರದಿಯ ಬಗ್ಗೆ ಚರ್ಚೆ ನಡೆಯಲಿದೆ. ನಂತರ, ಸದಸ್ಯರನ್ನು ಉಚ್ಚಾಟಿಸುವಂತೆ ಸರ್ಕಾರ ಮಂಡಿಸುವ ನಿಲುವಳಿ ಸೂಚನೆಯ ಮೇಲೆ ಮತದಾನ ನಡೆಯುತ್ತದೆ ಎಂದು ತಿಳಿಸಿದರು.

ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವ ತೀರ್ಮಾನ ಅನುಷ್ಠಾನಕ್ಕೆ ಬರಬೇಕು ಎಂದಾದರೆ ಸದನವು ಸಮಿತಿಯ ವರದಿಯನ್ನು ಅಂಗೀಕರಿಸಬೇಕಾಗುತ್ತದೆ ಎಂದು ಆಚಾರಿ ಹೇಳಿದರು.

‘ಕಾಂಗರೂ ನ್ಯಾಯಾಲಯದ ತೀರ್ಮಾನ’

ಕೋಲ್ಕತ್ತ (ಪಿಟಿಐ): ನೀತಿ ಸಮಿತಿಯ ಶಿಫಾರಸಿನ ಬಗ್ಗೆ ಕೆಂಡ ಕಾರಿರುವ ಮಹುವಾ ಮೊಯಿತ್ರಾ, ‘ಇದು ಕಾಂಗರೂ ನ್ಯಾಯಾಲಯದಲ್ಲಿ ಮೊದಲೇ ತೀರ್ಮಾನವಾಗಿದ್ದ ಸಂಗತಿ’ ಎಂದು ಹೇಳಿದ್ದಾರೆ. ಈ ಶಿಫಾರಸು ದೇಶದಲ್ಲಿ ‘ಸಂಸದೀಯ ಪ್ರಜಾತಂತ್ರದ ಅವಸಾನವನ್ನು’ ಹೇಳುತ್ತಿದೆ ಎಂದಿದ್ದಾರೆ.

‘ಅವರು ಹಾಲಿ ಲೋಕಸಭೆಯಿಂದ ನನ್ನನ್ನು ಉಚ್ಚಾಟಿಸಿದರೂ, ನಾನು ಮುಂದಿನ ಲೋಕಸಭೆಗೆ ಇನ್ನಷ್ಟು ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬರುತ್ತೇನೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಶಿಫಾರಸುಗಳು ಇನ್ನೂ ಅಂತಿಮಗೊಳ್ಳಬೇಕಿದೆ ಎಂದು ಮಹುವಾ ಹೇಳಿದ್ದಾರೆ. ‘ಇದು ಶಿಫಾರಸು ಮಾತ್ರ. ಇನ್ನೂ ಏನೂ ಆಗಿಲ್ಲ. ಅವರು ಇದನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿ. ಇದರಿಂದ ನನಗೆ ಏನೂ ಆಗುವುದಿಲ್ಲ. ಇದರಿಂದ ನನ್ನ ಬಾಯಿ ಮುಚ್ಚಿಸಲು ಆಗದು’ ಎಂದು ಮಹುವಾ ಹೇಳಿದ್ದಾರೆ.

ತಮ್ಮ ಮುಂದಿನ ನಡೆ ಏನಿರುತ್ತದೆ ಎಂಬ ಪ್ರಶ್ನೆಗೆ ಅವರು, ‘ಮೊದಲು ಅವರು ನನ್ನನ್ನು ಉಚ್ಚಾಟಿಸಲಿ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.