ADVERTISEMENT

ಒಬಿಸಿ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ: ಮಸೂದೆ ಅಂಗೀಕಾರ

ಲೋಕಸಭೆ ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 19:30 IST
Last Updated 2 ಆಗಸ್ಟ್ 2018, 19:30 IST
   

ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಗೆ ರಾಜ್ಯಸಭೆಯಲ್ಲಿ ಮಾಡಿದ್ದ ತಿದ್ದುಪಡಿ ರದ್ದಾಯಿತು.

ನಾಲ್ವರು ಸದಸ್ಯರನ್ನು ಒಳಗೊಂಡ ಒಬಿಸಿ ಆಯೋಗದಲ್ಲಿ ಒಬ್ಬರು ಮಹಿಳಾ ಸದಸ್ಯರಿಗೆ ಅವಕಾಶ ಮಾಡಿಕೊಡಲು ಸರ್ಕಾರ ನಿಯಮ ರೂಪಿಸುವುದಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್ ಭರವಸೆ ನೀಡಿದರು. ನಂತರವೇ ಸಂವಿಧಾನಕ್ಕೆ 123ನೇ ತಿದ್ದುಪಡಿ ತರುವ ಈ ಮಸೂದೆಯನ್ನು ಲೋಕಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.

ಮಸೂದೆ ಪರವಾಗಿ 406 ಸಂಸದರು ಮತ ಚಲಾಯಿಸಿದರು. ಮಸೂದೆ ಬಗ್ಗೆ ಸುಮಾರು ಐದು ತಾಸು ಚರ್ಚೆ ನಡೆಯಿತು. 32 ಸಂಸದರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಸಭೆಯಲ್ಲಿ ಈ ಮಸೂದೆಗೆ ಮಾಡಿದ್ದ ತಿದ್ದುಪಡಿಗಳನ್ನು ವಜಾಗೊಳಿಸಲಾಯಿತು.

ADVERTISEMENT

ಇದೇ ವರ್ಷದ ಜುಲೈ 31ರಂದು ರಾಜ್ಯಸಭೆಯಲ್ಲಿ ಒಬಿಸಿ ಆಯೋಗಕ್ಕೆ ಅಲ್ಪಸಂಖ್ಯಾತ ಸಮುದಾಯದಿಂದ ಮಹಿಳಾ ಸದಸ್ಯರೊಬ್ಬರನ್ನು ನೇಮಕ ಮಾಡಬೇಕೆಂದು ಮಸೂದೆಗೆ ತಿದ್ದುಪಡಿ ಮಾಡಿ, ವಾಪಸ್‌ ಕಳುಹಿಸಲಾಗಿತ್ತು.

‘ಒಬಿಸಿ ಆಯೋಗ ಕೇಂದ್ರೀಯ ಒಬಿಸಿಗಳ ಪಟ್ಟಿ ನಿರ್ಧರಿಸುತ್ತದೆ. ರಾಜ್ಯದ ಪಟ್ಟಿಯನ್ನು ರಾಜ್ಯ ಆಯೋಗ ನಿರ್ಧರಿಸುತ್ತದೆ. ರಾಜ್ಯ ಸರ್ಕಾರಗಳು ಒಬಿಸಿಗಳ ಪಟ್ಟಿ ಸಿದ್ಧಪಡಿಸಲು ಕೇಂದ್ರ ಆಯೋಗದ ವರದಿಯ ಅಗತ್ಯವಿರುವುದಿಲ್ಲ’ ಎಂದು ಸಚಿವ ಗೆಹ್ಲೋಟ್‌ ಸ್ಪಷ್ಟಪಡಿಸಿದರು.

ಚರ್ಚೆಯಲ್ಲಿ ಭಾಗವಹಿಸಿದ್ದ ಸಂಸದ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕ ಸದಸ್ಯರು, ಸುಪ್ರೀಂ ಕೋರ್ಟ್‌ ಮೀಸಲಾತಿ ಪ್ರಮಾಣ ಶೇಕಡ 50 ಮೀರಬಾರದೆಂದು ಹೇಳಿದೆ. ಇದನ್ನು ಹೆಚ್ಚು ಮಾಡಬಹುದೇ ಎನ್ನುವುದನ್ನು ಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.