ADVERTISEMENT

ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಕಾಣುತ್ತಿದೆ: ಲೋಕಸಭೆಯಲ್ಲಿ ಓವೈಸಿ ಕಿಡಿ

ಪಿಟಿಐ
Published 29 ಜುಲೈ 2024, 11:27 IST
Last Updated 29 ಜುಲೈ 2024, 11:27 IST
<div class="paragraphs"><p>ಅಸಾದುದ್ಧೀನ್‌ ಓವೈಸಿ</p></div>

ಅಸಾದುದ್ಧೀನ್‌ ಓವೈಸಿ

   

ಪಿಟಿಐ

ನವದೆಹಲಿ: ‘ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಎಐಎಂಐಎಂನ ಅಧ್ಯಕ್ಷ, ಸಂಸದ ಅಸಾದುದ್ಧೀನ್‌ ಓವೈಸಿ ಆರೋಪಿಸಿದರು.

ADVERTISEMENT

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ‘ಮುಸ್ಲಿಮರನ್ನು ‌ಸರ್ಕಾರ ಅಸ್ಪೃಶ್ಯರಂತೆ ಪರಿಗಣಿಸುತ್ತಿದೆ’ ಎಂದು ಕಿಡಿಕಾರಿದರು.

‘ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಸಮುದಾಯದ ಬಗ್ಗೆ ಉಲ್ಲೇಖಸಿದ್ದಾರೆ. ಈ ದೇಶದ 17 ಕೋಟಿ ಮುಸ್ಲಿಮರಲ್ಲಿ ಬಡವರು, ಯುವಕರು, ರೈತರು ಅಥವಾ ಮಹಿಳೆಯರು ಇಲ್ಲವೇ?’ ಎಂದು ಒವೈಸಿ ಪ್ರಶ್ನಿಸಿದರು.

‘ಈ ದೇಶದಲ್ಲಿ ಮುಸ್ಲಿಮರು ಕಡು ಬಡವರಾಗಿದ್ದು, ಮುಸ್ಲಿಂ ಸಮುದಾಯದ ಮಹಿಳೆಯರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ’ ಎಂದರು.

‘15ರಿಂದ 24 ವಯಸ್ಸಿನ ಮುಸ್ಲಿಮರಲ್ಲಿ ಶೇ 29ರಷ್ಟು ಮಂದಿ ಶಿಕ್ಷಣ ಪಡೆಯಲು ಸಶಕ್ತರಾಗಿದ್ದಾರೆ. ಇದಕ್ಕೆ ಹೋಲಿಸಿದರೆ ಪರಿಶಿಷ್ಟ ಜಾತಿಯಲ್ಲಿ ಶೇ.44, ಹಿಂದೂಳಿದ ವರ್ಗದವರಲ್ಲಿ ಶೇ 51 ಮತ್ತು ಹಿಂದೂ ಮೇಲ್ವರ್ಗದ ಜಾತಿಗಳಲ್ಲ ಶೇ 59ರಷ್ಟು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಕೆಲ ದಾಖಲೆಗಳನ್ನು ಮುಂದಿಟ್ಟು ವಾದ ಮಂಡಿಸಿದರು.

‘ಉನ್ನತ ಶಿಕ್ಷಣದ ವಿಷಯ ಬಂದರೆ ಮುಸ್ಲಿಂ ಸಮುದಾಯದ ದಾಖಲಾತಿ ಶೇ 5ರಷ್ಟು ಇದೆ’ ಎಂದು ಪಿಎಲ್‌ಎಫ್‌ಎಸ್‌ ಸಮೀಕ್ಷೆಯ ದಾಖಲೆಯನ್ನು ತೋರಿಸಿದರು.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಬಜೆಟ್‌ ಅನ್ನು ₹5 ಸಾವಿರ ಕೋಟಿಯಿಂದ ₹3 ಸಾವಿರ ಕೋಟಿಗೆ ಇಳಿಕೆ ಮಾಡಿರುವುದನ್ನು ಖಂಡಿಸಿರುವ ಓವೈಸಿ, ‘ಈ ಬಾರಿಯ ಬಜೆಟ್‌ನಲ್ಲಿ ಸಚಿವಾಲಯಕ್ಕೆ ಅಲ್ಪ ಮೊತ್ತ ಹೆಚ್ಚಳ ಮಾಡಿರುವುದಾಗಿ ಹೇಳಿರುವುದು ಸರ್ಕಾರದ ಸುಳ್ಳು ಬದ್ಧತೆಯನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.

‘2007-2008ರಿಂದ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಹೆಚ್ಚಳ ಕಂಡಿಲ್ಲ’ ಎಂದು ಇದೇ ವೇಳೆ ಸದನದ ಗಮನಕ್ಕೆ ತಂದರು.

‘ಹಜ್‌ ಸಮಿತಿಯು ಭ್ರಷ್ಟಾಚಾರ ಕೇಂದ್ರವಾಗಿದ್ದು, ಸಿಬಿಐ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಭಾರತ ನೋವಿನಲ್ಲಿದೆ’ ಎಂದು ತಮ್ಮ ಭಾಷಣವನ್ನು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.