ADVERTISEMENT

ಮುಖಾಮುಖಿ: ಪಶ್ಚಿಮ ಬಂಗಾಳದ ಬಹರಾಂಪುರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 0:17 IST
Last Updated 26 ಮಾರ್ಚ್ 2024, 0:17 IST
   

ಅಧೀರ್‌ ರಂಜನ್‌ ಚೌಧರಿ (ಕಾಂಗ್ರೆಸ್‌)

ಪಶ್ಚಿಮ ಬಂಗಾಳದ ಬಹರಾಂಪುರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ನಾಯಕ ಅಧೀರ್‌ ರಂಜನ್‌ ಚೌಧರಿ ಅವರ ಭದ್ರಕೋಟೆ. ಈ ಕ್ಷೇತ್ರದಿಂದ ಐದು ಸಲ ಸಂಸತ್‌ಗೆ ಆಯ್ಕೆಯಾಗಿರುವ ಅವರು, ಈ ಬಾರಿಯೂ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 1999ರಲ್ಲಿ ಮೊದಲ ಬಾರಿ ಅವರು ಇಲ್ಲಿಂದ ಗೆದ್ದಿದ್ದರು. 67 ವರ್ಷದ ಚೌಧರಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಹೌದು. ರಾಜ್ಯದ ಪ್ರಭಾವಿ ಕಾಂಗ್ರೆಸ್‌ ನಾಯಕರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ರಚನೆಯಾಗುವಲ್ಲಿ ಇವರು ಮುಖ್ಯ ರೂವಾರಿಯಾಗಿದ್ದರು. ಇವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕಟು ಟೀಕಾಕಾರರೂ ಹೌದು. 2019ರ ಚುನಾವಣೆಯಲ್ಲಿ ಅವರು ಟಿಎಂಸಿ ಅಭ್ಯರ್ಥಿಯ ವಿರುದ್ಧ 80,000 ಮತಗಳ ಅಂತರದಿಂದ ಗೆದ್ದಿದ್ದರು.

ಯೂಸುಫ್‌ ಪಠಾಣ್‌ ( ತೃಣಮೂಲ ಕಾಂಗ್ರೆಸ್‌)

ಬಹರಾಂಪುರ ಕ್ಷೇತ್ರದಲ್ಲಿ ಅಧೀರ್‌ ರಂಜನ್‌ ಚೌಧರಿ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಮಣಿಸಲು ಟಿಎಂಸಿ, ಈ ಬಾರಿ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಅವರನ್ನು ಅಖಾಡಕ್ಕಿಳಿಸಿದೆ. ಟಿಎಂಸಿ ಅಭ್ಯರ್ಥಿಯಾಗಿ 41ವರ್ಷದ ಯೂಸುಫ್‌ ಅವರ ಹೆಸರನ್ನು ಘೋಷಿಸಿದ ಕೂಡಲೇ ಪ್ರತಿಸ್ಪರ್ಧಿಗಳು ಅವರಿಗೆ ಹೊರಗಿನವರೆಂಬ ಹಣೆಪಟ್ಟಿ ನೀಡಿದ್ದಾರೆ. ಗುಜರಾತ್‌ನ ವಡೋದರದ ಯೂಸುಫ್‌, 2021ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಯೂಸುಫ್‌ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡಿದ್ದಕ್ಕೆ ಟಿಎಂಸಿಯ ಕೆಲವು ನಾಯಕರು ಆರಂಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಸ್ಲಿಂ ಮತಗಳನ್ನು ವಿಭಜಿಸುವ ಉದ್ದೇಶದಿಂದ ಯೂಸುಫ್‌ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕ್ರಿಕೆಟ್‌ ಆಟಗಾರರಾಗಿ ಪ್ರಸಿದ್ಧರಾಗಿದ್ದರೂ ರಾಜಕೀಯದಲ್ಲಿ ಅನನುಭವಿಯಾಗಿರುವ ಯೂಸುಫ್ ಅವರು ಅನುಭವಿ ರಾಜಕಾರಣಿ ಚೌಧರಿ ಅವರನ್ನು ಮಣಿಸುತ್ತಾರೊ ಎಂಬುದನ್ನು ಕಾದು ನೋಡಬೇಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.