ವಯನಾಡ್: ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೈದ್ಧಾಂತಿಕವಾಗಿ ದಿವಾಳಿಯಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್‌ನ ಸುಲ್ತಾನ್ ಬತ್ತೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.
‘ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಇಬ್ಬಗೆ ನೀತಿ ಹಾಗೂ ಬೂಟಾಟಿಕೆ ಇಲ್ಲಿ ಗೊತ್ತಾಗುತ್ತಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಪತ್ನಿ (ಆನಿ ರಾಜಾ) ಅವರು ರಾಹುಲ್ ಗಾಂಧಿ ವಿರುದ್ಧ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಡಿ. ರಾಜಾ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಡುವೆ ಕುಳಿತುಕೊಳ್ಳುತ್ತಾರೆ. ಅವರು ಸೈದ್ಧಾಂತಿಕವಾಗಿ ದಿವಾಳಿಯಾಗಿಯಾಗಿದ್ದಾರೆ’ ಎಂದು ನಡ್ಡಾ ಹೇಳಿದ್ದಾರೆ.
ಇವಿಎಂನಲ್ಲಿ ಏನೂ ಸಮಸ್ಯೆ ಇಲ್ಲದೆ ಹೋದರೆ ಬಿಜೆಪಿ 180ಕ್ಕಿಂತ ಅಧಿಕ ಸೀಟು ಗೆಲ್ಲುವುದಿಲ್ಲ ಎನ್ನುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಕರ್ನಾಟಕದಲ್ಲಿ ಗೆಲುವು ಸಾಧಿಸಿದ ಅವರಿಗೆ ಇವಿಎಂನಲ್ಲಿ ಸಮಸ್ಯೆ ಇರಲಿಲ್ಲ. ಐದು ವರ್ಷ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದಾಗಲೂ ಇವಿಎಂ ಸಮಸ್ಯೆ ಇರಲಿಲ್ಲ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಸಹೋದರ ರಾಹುಲ್ ಗಾಂಧಿ ‘ರಾಜಕೀಯ ಪ್ರವಾಸಿಗರು’. ಚುನಾವಣೆ ವೇಳೆ ಇಲ್ಲಿಗೆ ಬರುತ್ತಾರೆ. ಬಳಿಕ ಕಾಣೆಯಾಗುತ್ತಾರೆ ಎಂದು ಲೇವಡಿ ಮಾಡಿದರು.
ವಯನಾಡ್ ಹೊರತಾಗಿ ತಿರುವನಂತಪುರ, ಪಾಲಕ್ಕಾಡ್ ಹಾಗೂ ಕೋಟ್ಟಯಂನಲ್ಲೂ ಜೆ.ಪಿ ನಡ್ಡಾ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.