ADVERTISEMENT

ಲೋಕಸಭೆ ಚುನಾವಣೆ: ಪಕ್ಷಪಾತ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಪಿಟಿಐ
Published 2 ಮಾರ್ಚ್ 2024, 15:35 IST
Last Updated 2 ಮಾರ್ಚ್ 2024, 15:35 IST
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಖನೌದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. 
ಪಿಟಿಐ ಚಿತ್ರ
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಖನೌದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.  ಪಿಟಿಐ ಚಿತ್ರ   

ಲಖನೌ: ಲೋಕಸಭಾ ಚುನಾವಣೆಯ ವೇಳೆ ಪಕ್ಷಪಾತ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗವು ಶನಿವಾರ ದೇಶದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಲೋಕಸಭಾ ಚುನಾವಣೆಯನ್ನು ‘ಪ್ರಲೋಭನೆರಹಿತ’ವಾಗಿ ನಡೆಸುವುದು ಮತ್ತು ಎಲ್ಲ ಪಕ್ಷಗಳಿಗೂ ಚುನಾವಣೆಯಲ್ಲಿ ಸಮಾನ ಅವಕಾಶ ಸಿಗುವಂತೆ ಮಾಡುವ ದಿಸೆಯಲ್ಲಿ ಆಯೋಗವು ಈ ನಿರ್ದೇಶನ ನೀಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಲಖನೌದಲ್ಲಿ ತಿಳಿಸಿದ್ದಾರೆ.

‘ಎಲ್ಲ ಪಕ್ಷಗಳಿಗೂ ಸಮಾನ ಸ್ಪರ್ಧೆಯ ಅವಕಾಶ ಸಿಗುವಂತೆ ಮಾಡುವ ದಿಸೆಯಲ್ಲಿ ಚುನಾವಣೆಯ ಮುಖ್ಯ ಹಂತಗಳಲ್ಲಿ ಕೆಲಸ ಮಾಡುವ ಕಿರಿಯ ಅಧಿಕಾರಿಗಳು ಪಕ್ಷಪಾತರಹಿತವಾಗಿ ಕೆಲಸ ನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ದೂರು ನೀಡಿದ ತಕ್ಷಣ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಬಾವುಟದ ಅಳತೆಯನ್ನು ವಿವರಿಸುವ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಇವಿಎಂ ಅನ್ನು ಜಿಪಿಎಸ್ ಅಳವಡಿಸಿರುವ ಅಧಿಕೃತ ವಾಹನಗಳಲ್ಲಿಯೇ ಸಾಗಿಸಲಾಗುವುದು. ಮೊದಲು ಅಂಚೆ ಮತಗಳ ಎಣಿಕೆ ಮಾಡಲಾಗುತ್ತದೆ’ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

‘ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿರುವವರಿಗೆ ಮತದಾರ ಸಹಾಯ ಕೇಂದ್ರಗಳಲ್ಲಿ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲ ತಾಣ ಕೇಂದ್ರ ಸ್ಥಾಪನೆ ಮಾಡಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.