ADVERTISEMENT

ದ್ವೇಷ, ಭಯೋತ್ಪಾದನೆಯ ಶಕ್ತಿಗಳನ್ನು ಸೋಲಿಸಿ: ಫವಾದ್ ಹೇಳಿಕೆಗೆ ಕೇಜ್ರಿವಾಲ್ ಕಿಡಿ

ಪಾಕ್ ಮಾಜಿ ಸಚಿವ ಫವಾದ್ ಹುಸೇನ್ ಹೇಳಿಕೆ ವಿರುದ್ಧ ಅರವಿಂದ ಕೇಜ್ರಿವಾಲ್ ಕಿಡಿ

ಪಿಟಿಐ
Published 25 ಮೇ 2024, 14:31 IST
Last Updated 25 ಮೇ 2024, 14:31 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಲೋಕಸಭಾ ಚುನಾವಣೆಯು ಭಾರತದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ‘ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಕರ’ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

‘ಭಾರತದ ಚುನಾವಣೆಯಲ್ಲಿ ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳನ್ನು ಸೋಲಿಸಿ’ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಅವರಿಗೆ ಕೇಜ್ರಿವಾಲ್ ತಿರುಗೇಟು ನೀಡಿದರು.

ದೆಹಲಿಯಲ್ಲಿ ಮತದಾನ ಮಾಡಿದ ನಂತರ ಅವರು ಅದರ ಬಗ್ಗೆ ‘ಎಕ್ಸ್‌’ನಲ್ಲಿ ‍ಪೋಸ್ಟ್ ಮಾಡಿ, ‘ಸರ್ವಾಧಿಕಾರ, ಹಣದುಬ್ಬರ, ನಿರುದ್ಯೋಗ’ದ ವಿರುದ್ಧ ಮತ ಚಲಾವಣೆ ಮಾಡಿದ್ದಾಗಿ ಉಲ್ಲೇಖಿಸಿದ್ದರು.

ADVERTISEMENT

ಅದನ್ನು ಹಂಚಿಕೊಂಡಿದ್ದ ಫವಾದ್ ಹುಸೇನ್, ‘ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳನ್ನು ಸೋಲಿಸಲಿ’ ಎಂದು ಹಾರೈಸಿದ್ದರು. 

ಹುಸೇನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ಚೌಧರಿ ಸಾಬ್, ನಾನು ಮತ್ತು ನನ್ನ ದೇಶದ ಜನ ನಮ್ಮ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ. ನಿಮ್ಮ ಹೇಳಿಕೆ ಅನಗತ್ಯ. ಪಾಕಿಸ್ತಾನದ ಸದ್ಯದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಿಮ್ಮ ದೇಶದ ಬಗ್ಗೆ ಗಮನ ಹರಿಸಿ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಅದಕ್ಕೆ ಫವಾದ್ ಹುಸೇನ್ ಮತ್ತೆ ಪ್ರತಿಕ್ರಿಯಿಸಿದ್ದು, ‘ಮುಖ್ಯಮಂತ್ರಿ ಸಾಬ್, ಚುನಾವಣೆ ಎನ್ನುವುದು ನಿಮ್ಮ ವಿಚಾರವೇ ಸರಿ. ಆದರೆ, ಭಯೋತ್ಪಾದನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲೇ ಇರಲಿ, ಅದು ಅಪಾಯಕಾರಿಯೇ. ಆತ್ಮಸಾಕ್ಷಿ ಇರುವ ಪ್ರತಿಯೊಬ್ಬರೂ ಅದರ ಬಗ್ಗೆ ಗಮನ ಹರಿಸಬೇಕು’ ಎಂದಿದ್ದಾರೆ.

ಕೇಜ್ರಿವಾಲ್ ಹಾಗೂ ಹುಸೇನ್ ನಡುವಿನ ಸಂವಾದವನ್ನು ಬಿಜೆಪಿ ಟೀಕಿಸಿದೆ.

‘ಕೇಜ್ರಿವಾಲ್ ಅವರು ದೇಶದ ಶತ್ರುಗಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದಾರೆ’ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಹೇಳಿದ್ದಾರೆ.

‘ರಾಹುಲ್ ಬೆಂಕಿ’ ಎಂದಿದ್ದ ಹುಸೇನ್
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಅವರು ರಾಹುಲ್ ಗಾಂಧಿ ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿದ್ದ ವಿಡಿಯೊ ಅನ್ನು ಮೇ 1ರಂದು ‘ಎಕ್ಸ್‌’ನಲ್ಲಿ ಹಂಚಿಕೊಂಡು ‘ರಾಹುಲ್ ಗಾಂಧಿ ಬೆಂಕಿ’ ಎಂದು ಉಲ್ಲೇಖಿಸಿದ್ದರು. ಅದರ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನವು ರಾಹುಲ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಬಯಸುತ್ತಿದೆ ಎಂದು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.