ADVERTISEMENT

ಆಂಧ್ರ: ತೆಲುಗುದೇಶಂ ಜಯಭೇರಿ; ಆಡಳಿತವಿರೋಧಿ ಅಲೆಗೆ ಜಗನ್ ನೇತೃತ್ವದ YSRCP ದೂಳೀಪಟ

ಪಿಟಿಐ
Published 4 ಜೂನ್ 2024, 23:31 IST
Last Updated 4 ಜೂನ್ 2024, 23:31 IST
<div class="paragraphs"><p>ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ –ತೆಲುಗುದೇಶಂ –ಬಿಜೆಪಿ ಮೈತ್ರಿಕೂಟದ ಗೆಲುವಿನ ರೂವಾರಿಗಳಾದ ನಟ ಪವನ್‌ ಕಲ್ಯಾಣ್, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು.</p></div>

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ –ತೆಲುಗುದೇಶಂ –ಬಿಜೆಪಿ ಮೈತ್ರಿಕೂಟದ ಗೆಲುವಿನ ರೂವಾರಿಗಳಾದ ನಟ ಪವನ್‌ ಕಲ್ಯಾಣ್, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು.

   

ಪಿಟಿಐ ಚಿತ್ರ

ಅಮರಾವತಿ: ನೆರೆಯ ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಜಯಭೇರಿ ಬಾರಿಸಿದೆ.

ADVERTISEMENT

ಈ ಚುನಾವಣೆಯಲ್ಲಿ ನಾಯ್ಡು ಅಕ್ಷರಶಃ ಪುಟಿದೆದ್ದು ನಿಂತಿದ್ದಾರೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ತೆಲುಗುದೇಶಂ ಪಕ್ಷ 13 ಸ್ಥಾನ ಗೆದ್ದಿದ್ದು, ಸ್ಪಷ್ಟಬಹುಮತ ಪಡೆದಿದೆ. ಸರ್ಕಾರ ರಚನೆಗೆ ಪಕ್ಷ ಸಜ್ಜಾಗಿದೆ.

ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿದ್ದ ತೆಲುಗುದೇಶಂ ರಾಜ್ಯದಲ್ಲಿ ನಟ ಪವನ್‌ ಕಲ್ಯಾಣ್ ನೇತೃತ್ವದ ಜನಸೇನಾ, ಬಿಜೆಪಿ ಜೊತೆಗೂಡಿ ಮೈತ್ರಿಹೊಂದಿತ್ತು. ಆಡಳಿತವಿರೋಧಿ ಆಲೆಯೊಂದಿಗೆ, ವಿರೋಧಪಕ್ಷಗಳ ಧ್ರುವೀಕರಣವೂ ವೈಎಸ್‌ಆರ್‌ಸಿಪಿಯನ್ನು ನೇಪಥ್ಯಕ್ಕೆ ಸರಿಸಿದೆ. 

ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲುವಿನ ಜೊತೆಗೆ ರಾಷ್ಟ್ರಮಟ್ಟದಲ್ಲೂ ನಿರ್ಣಾಯಕ ಪಾತ್ರ ವಹಿಸುವ ‘ಶಕ್ತಿ’ಯನ್ನು ನಾಯ್ಡು ಈ ಫಲಿತಾಂಶದಿಂದ ಪಡೆದುಕೊಂಡಿದ್ದಾರೆ. ತೆಲುಗುದೇಶಂ ಹಾಗೂ ನಟ ಪವನ್‌ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಮೈತ್ರಿಕೂಟ ಒಟ್ಟು 162 ಸ್ಥಾನವನ್ನು ಗೆದ್ದುಕೊಂಡಿವೆ.

ಸೀಟು ಹಂಚಿಕೆ ಒಪ್ಪಂದದಂತೆ ತೆಲುಗುದೇಶಂ ವಿಧಾನಸಭೆಯ 144, ಲೋಕಸಭೆಯ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಜನಸೇನಾ ಪಕ್ಷ ವಿಧಾನಸಭೆಯ 21, ಲೋಕಸಭೆಯ 2 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಚಂದ್ರಬಾಬು ನಾಯ್ಡು ಈ ಗೆಲುವಿನೊಂದಿಗೆ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಗಾದಿಗೇರುವುದು ನಿಚ್ಚಳವಾಗಿದೆ.

ಈ ಫಲಿತಾಂಶದ ಮೂಲಕ ಸಾರ್ವತ್ರಿಕ ಚುನಾವಣೆಯಲ್ಲಿಯೂ ಆಡಳಿತ ಪಕ್ಷವನ್ನು ಬದಲಿಸುವ ಸಂಪ್ರದಾಯವು ಆಂಧ್ರಪ್ರದೇಶದಲ್ಲಿ ಆರಂಭವಾದಂತಿದೆ. 2019ರಲ್ಲಿ ವೈಎಸ್‌ಆರ್‌ಸಿಪಿ ಒಟ್ಟು 151 ಕ್ಷೇತ್ರಗಳಲ್ಲಿ ಗೆದ್ದಿದ್ದು, ಭಾರಿ ಬಹುಮತದೊಂದಿಗೆ ಅಧಿಕಾರಗಳಿಸಿತ್ತು. ಈ ಚುನಾವಣೆಯಲ್ಲಿ ಅದರ ಬಲ 10 ಸ್ಥಾನಕ್ಕೆ ಇಳಿದಿದೆ.  

ಕಳೆದ ಚುನಾವಣೆಯಲ್ಲಿನ ಸೋಲಿನ ಬಳಿಕ, ವಯಸ್ಸಿನಲ್ಲಿ ಕಿರಿಯರಾಗಿದ್ದ ಜಗನ್‌ಮೋಹನ್‌ ರೆಡ್ಡಿ ಅವರಿಂದ ತೀವ್ರ ಅಪಮಾನಕ್ಕೀಡಾಗಿದ್ದ ನಾಯ್ಡು, ಧೃತಿಗೆಟ್ಟಿದ್ದರು. ನಿರ್ಮಾಣ ನಿಯಮ ಉಲ್ಲಂಘನೆ ಆರೋಪದಡಿ, ಅಮರಾವತಿಯಲ್ಲಿ ಅವರು ನಿರ್ಮಿಸಿದ್ದ ‘ಪ್ರಜಾವೇದಿಕಾ’ ಕಟ್ಟಡ ನೆಲಸಮಗೊಳಿಸಲಾಗಿತ್ಡು. ಭ್ರಷ್ಟಾಚಾರದ ಆರೋಪದಡಿ ನಾಯ್ಡು ಜೈಲು ಸೇರಿದ್ದರು. ತೀವ್ರ ಅಪಮಾನಿತರಾಗಿ ವಿಧಾನಸಭೆಯಲ್ಲಿಯೇ ಕಣ್ಣೀರು ಹಾಕಿದ್ದರು. ಸ್ಪಷ್ಟ ಅಧಿಕಾರ ಸಿಗುವವರೆಗೆ ಸದನಕ್ಕೆ ಪ್ರವೇಶಿಸುವುದಿಲ್ಲ ಎಂದೂ ಶಪಥ ಮಾಡಿದ್ದರು.

ನಾಯ್ಡು 1995ರಲ್ಲಿ ಮೊದಲ ಬಾರಿಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. ಆನಂತರ ಮತ್ತೊಂದು ಅವಧಿಗೆ ಅವಿಭಜಿತ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್ಯ ವಿಭಜನೆಯ 10 ವರ್ಷದ ನಂತರ ಮತ್ತೆ ಮುಖ್ಯಮಂತ್ರಿಯಾಗಿದ್ದು, ರಾಜಧಾನಿಯಾಗಿ ಅಮರಾವತಿ  ನಗರ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. 90ರ ದಶಕದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಹಾಗೂ ಎ.ಬಿ.ವಾಜಪೇಯಿ ಅವರು ಪ್ರಧಾನಿಯಾಗಿ, ಎನ್‌ಡಿಎ ಸರ್ಕಾರ ಸ್ಥಾಪನೆಯಲ್ಲಿ ನಿರ್ಣಾಯಕ ಹೊಣೆಗಾರಿಕೆಯನ್ನೂ ನಿಭಾಯಿಸಿದ್ದರು.

ರಾಜ್ಯದ ಕೌಶಲ ಅಭಿವೃದ್ದಿ ನಿಗಮದ ಅಕ್ರಮಕ್ಕೆ ಸಂಬಂಧಿಸಿ ವೈ‌ಎಸ್‌ಆರ್‌ಸಿಪಿ ಸರ್ಕಾರ ನಾಯ್ಡುರನ್ನು 2023ರಲ್ಲಿ ಬಂಧಿಸಿತ್ತು. 2 ತಿಂಗಳು ಜೈಲಿನಲ್ಲಿದ್ದರು. ಅವು ಅವರ ರಾಜಕೀಯ ಬದುಕಿನ ಕಷ್ಟದ ದಿನಗಳು. ಕಳೆದ ವರ್ಷ ಅ. 31ರಂದು ಮಧ್ಯಂತರ ಜಾಮೀನು ಪಡೆದು ಹೊರಬಂದರು. ಈಗ ಪುಟಿದೆದ್ದು ನಿಂತಿದ್ದಾರೆ.

ಮತದಾರರೊಂದಿಗೆ ಚಂದ್ರಬಾಬು ನಾಯ್ಡು  –ಪಿಟಿಐ ಸಂಗ್ರಹಚಿತ್ರ
ಹಲವು ಕಲ್ಯಾಣ ಕಾರ್ಯಕ್ರಮಗಳ ಜಾರಿಯ ನಂತರವೂ ಪಕ್ಷದ ಹಿನ್ನೆಗೆ ಕಾರಣ ತಿಳಿಯಲು ವಿಫಲನಾಗಿದ್ದೇನೆ. ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ. ವೈಎಸ್‌ಆರ್‌ಸಿಪಿ ಇನ್ನು ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಗೆಲುವಿಗಾಗಿ ಚಂದ್ರಬಾಬುನಾಯ್ಡು ಪವನ್‌ ಕಲ್ಯಾಣ್ ಅವರಿಗೆ ಅಭಿನಂದನೆಗಳು.
ವೈ.ಎಸ್‌.ಜಗನ್‌ ಮೋಹನ ರೆಡ್ಡಿ ನಿರ್ಗಮಿತ ಮುಖ್ಯಮಂತ್ರಿ ಆಂಧ್ರಪ್ರದೇಶ
ಜಗನ್‌ ಮೋಹನ್‌ ರೆಡ್ಡಿಗೆ ಮುಖಭಂಗ 
ಕಳೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದ್ದ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿಗೆ ಈ ಬಾರಿ ತೀವ್ರ ಮುಖಭಂಗವಾಗಿದೆ. ವೈಎಸ್‌ಆರ್‌ಸಿಪಿ ಈ ಬಾರಿ 10 ಸ್ಥಾನವಷ್ಟೇ ಗೆದ್ದಿದೆ. ಈ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಪುಲಿವೆಂದುಲ ವಿಧಾನಸಭೆ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ತೆಲುಗುದೇಶಂ ಪಕ್ಷದ ಬಿ.ರವಿ ವಿರುದ್ಧ ಕೇವಲ –– ಮತಗಳ ಅಂತರದಿಂದ ಪ್ರಯಾಸದ ಗೆಲುವು ಕಂಡಿದ್ದಾರೆ.  ಇನ್ನೊಂದೆಡೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್‌ ಕ್ರಮವಾಗಿ ಕುಪ್ಪಂ ಮತ್ತು ಮಂಗಳಗಿರಿ ಕ್ಷೇತ್ರದಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಮೈತ್ರಿಪಕ್ಷ ಜನಸೇನಾದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪೀತಪುರಂ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ವೈಎಸ್‌‌ಆರ್‌ಸಿಪಿಯ ವಿ.ಗೀತಾ ವಿರುದ್ಧ 61 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.  ಮಂತ್ರಿಗಳಿಗೆ ಸೋಲು: ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಕೆ.ರೋಜಾ ಬೋಚಾ ಸತ್ಯನಾರಾಯಣ ಸಿ.ಗೋಪಾಲಕೃಷ್ಣ ಎಸ್‌.ಅಪ್ಪಾಲರಾಜು ಅಂಬಟಿ ರಾಮಬಾಬು ವಿ.ರಜಿನಿ ಟಿ.ವನಿತಾ ಅಮರನಾಥ್ ಅಮ್ಜದ್‌ ಭಾಷಾ ಆಡಳಿತವಿರೋಧಿ ಅಲೆಯಿಂದಾಗಿ ಪರಾಭವಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.