ಪಟ್ನಾ: ಬಿಹಾರ ಮುಖ್ಯಮಂತ್ರಿಯೂ ಆಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟ ತೊರೆದು ಇಂಡಿಯಾ ಮೈತ್ರಿಕೂಟವನ್ನು ಸೇರಿಕೊಳ್ಳಲಿದ್ದಾರೆ ಎಂದು ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
‘ನಾವು ಈ ಹಿಂದೆ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಜೊತೆಗೆ ಮೈತ್ರಿ ಮಾಡಿಕೊಂಡಿದ್ದೆವು. ಬಿಜೆಪಿಯ ಸೇಡಿನ ರಾಜಕಾರಣ ಇವರಿಬ್ಬರಿಗೂ ಇಷ್ಟವಿಲ್ಲ. ನರೇಂದ್ರ ಮೋದಿಯವರು ಹೊರನಡೆಯುವ ಹಾದಿಯಲ್ಲಿದ್ದಾರೆ. ಈ ಇಬ್ಬರು ನಾಯಕರು ಕೇಂದ್ರದಲ್ಲಿ ಉಂಟಾಗುವ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆಯೇ ಎನ್ನುವ ಪ‍್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಅವರು, ‘ಯಾರು ಅವರನ್ನು ಸಂಪರ್ಕ ಮಾಡಬೇಕೋ, ಅವರು ಸಂಪರ್ಕಿಸಿ ಮಾತನಾಡುತ್ತಿದ್ದಾರೆ. ಜೂನ್ 4ರಂದು ನಿತೀಶ್ ಕುಮಾರ್ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತೇಜಸ್ವಿ ಯಾದವ್ ಹಲವು ಬಾರಿ ಹೇಳಿದ್ದಾರೆ’ ಎಂದು ನುಡಿದಿದ್ದಾರೆ.
ಬಿಹಾರದಲ್ಲಿ ಜೆಡಿಯು ನಿರೀಕ್ಷೆಗಿಂತ ಉತ್ತಮ ಸೀಟು ಗಳಿಸಿದ್ದು, ಸ್ಪರ್ಧಿಸಿದ 16 ಕ್ಷೇತ್ರಗಳಲ್ಲಿ 14ರಲ್ಲಿ ಜಯಗಳಿಸಿದೆ. 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಗೆ ಕೇವಲ 5 ಸೀಟು ದಕ್ಕಿದೆ.
40 ಕ್ಷೇತ್ರಗಳ ಪೈಕಿ ಇಂಡಿಯಾ ಒಕ್ಕೂಟ ಕೇವಲ 8 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಸಂಪೂರ್ಣ ಫಲಿತಾಂಶ ಹೊರಬರುವ ವೇಳೆಗೆ ಈ ಸಂಖ್ಯೆ ಹೆಚ್ಚಳವಾಗಬಹುದು ಎಂದು ಝಾ ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.