ನವದೆಹಲಿ: ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 37.53 ಲಕ್ಷ ಷೇರುಗಳನ್ನು ಬುಧವಾರ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ₹368 ಕೋಟಿಗಳಿಗೆ ಖರೀದಿಸಿದೆ.
ರಾಷ್ಟ್ರೀಯ ಷೇರುಪೇಟೆಯಲ್ಲಿನ (ಎನ್‌ಎಸ್‌ಇ) ಷೇರುಗಳ ಸಗಟು ಖರೀದಿ ದತ್ತಾಂಶದ ಪ್ರಕಾರ, ಶೇ 2.28ರಷ್ಟು ಪಾಲು ಬಂಡವಾಳದ ಷೇರುಗಳನ್ನು ₹ 367.8 ಕೋಟಿಗೆ ಖರೀದಿಸಲಾಗಿದೆ. ಪ್ರತಿ ಷೇರಿನ ಸರಾಸರಿ ಬೆಲೆ ₹ 979.96ರಂತೆ ಈ ಖರೀದಿ ವಹಿವಾಟು ನಡೆದಿದೆ.
ಇನ್ನೊಂದು ಬೆಳವಣಿಗೆಯಲ್ಲಿ ರೇಖಾ ಎನ್. ಶಾ ಎನ್ನುವವರು ಮೈಂಡ್‌ಟ್ರೀನಲ್ಲಿನ 26.84 ಲಕ್ಷ ಷೇರುಗಳನ್ನು ₹ 263 ಕೋಟಿಗೆ ಮಾರಾಟ ಮಾಡಿದ್ದಾರೆ.
ಎಲ್‌ಆ್ಯಂಡ್‌ಟಿ, ಸತತ ಮೂರನೇ ದಿನವೂ ಮುಕ್ತ ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಿದಂತಾಗಿದೆ. ಹಿಂದಿನ ವಾರ, ಎಲ್‌ಆ್ಯಂಡ್‌ಟಿ, ಮೈಂಡ್‌ಟ್ರೀನಲ್ಲಿನ ವಿ. ಜಿ. ಸಿದ್ಧಾರ್ಥ ಮತ್ತು ಕಾಫಿ ಡೇ ಹೊಂದಿದ್ದ ಷೇರುಗಳನ್ನು ₹3,210 ಕೋಟಿಗೆ ಖರೀದಿಸಿತ್ತು. ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ಎಲ್‌ಆ್ಯಂಡ್‌ಟಿ ಹವಣಿಸುತ್ತಿದೆ. ಇದಕ್ಕೆ ಮೈಂಡ್‌ಟ್ರೀ ಪ್ರವರ್ತಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.