ಲಖನೌ: ಪಬ್‌ಜಿ ಆಡದಂತೆ ತಡೆದ ತಾಯಿಗೆ ಗುಂಡಿಕ್ಕಿ ಕೊಂದಿದ್ದಾಗಿ ಬಾಲಕ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದು, ಗಲ್ಲುಶಿಕ್ಷೆಯನ್ನು ಎದುರಿಸಲು ಸಿದ್ಧನೆಂದು ಹೇಳಿದ್ದಾನೆ.
'ನಾನು ಹೆದರಿಕೊಂಡಿಲ್ಲ. ಗರಿಷ್ಠ ಶಿಕ್ಷೆಯಾದ ಗಲ್ಲುಶಿಕ್ಷೆಯನ್ನು ಎದುರಿಸಲು ಸಿದ್ಧನಿದ್ದೇನೆ. ಪಿಸ್ತೂಲಿನಿಂದ ಗುಂಡು ಹಾರಿಸಿ ತಾಯಿಯನ್ನು ಹತ್ಯೆ ಮಾಡಿದ್ದೇನೆ. ಅಂದು ರಾತ್ರಿಯಿಡಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದೇನೆ' ಎಂದು 16 ವರ್ಷದ ಬಾಲಕ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿರುವುದಾಗಿ 'ಇಂಡಿಯಾ ಟುಡೇ' ವರದಿ ಮಾಡಿದೆ.
ಕೊಲೆ ನಡೆದ ರಾತ್ರಿ ಸುಮಾರು 2 ಗಂಟೆಗೆ ಬಾಲಕ ಯಾರನ್ನೊ ತುರ್ತಾಗಿ ಭೇಟಿ ಮಾಡಲು ಹೊರಗೆ ಹೋಗಿದ್ದಾಗಿ ಸಹೋದರಿ ತಿಳಿಸಿದ್ದಾಳೆ. ಈ ಸಂದರ್ಭ ತನ್ನನ್ನು ಮನೆಯಲ್ಲೇ ಕೂಡಿ ಹಾಕಿ ಹೋಗಿದ್ದಾಗಿ ಹೇಳಿದ್ದಾಳೆ.
ಕೊಲೆಯನ್ನು ಬಾಲಕನ ತಲೆಗೆ ಕಟ್ಟಲು ಯಾರೋ ಪ್ರಯತ್ನಿಸಿದ್ದಾರೆ. ಕೊಲೆಯನ್ನು ಆತ ಮಾಡಿಲ್ಲ, ಯಾರೋ ಮಾಡಿಸಿದ್ದಾರೆ ಎಂದು ಆತನ ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಸಿದ್ದಾರೆ. ತಾಯಿ ಮೇಲಿನ ಪುತ್ರನ ಕೋಪವನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದಾಗ ಬಾಲಕ ಧ್ವನಿಯೇರಿಸಿ ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಪಿಸ್ತೂಲ್ ಬಳಕೆಯ ತರಬೇತಿಯನ್ನು ಆತನಿಗೆ ನೀಡಲಾಗಿದೆ. ಕೃತ್ಯಕ್ಕೆ ಪಬ್‌ಜಿ ಹಿನ್ನೆಲೆಯನ್ನು ಕೊಟ್ಟು ಪೊಲೀಸರು ತಪ್ಪಾಗಿ ತನಿಖೆ ನಡೆಸಿದ್ದಾರೆ ಎಂದೂ ಪೋಷಕರು ದೂರಿದ್ದಾರೆ.
ಕಳೆದ ಶನಿವಾರ, ಜೂನ್ 4ರಂದು ರಾತ್ರಿ ಬಾಲಕನ ತಾಯಿ ತಮ್ಮ ಕೋಣೆಯಲ್ಲಿ ಮಲಗಿದ್ದರು. ಆಗ, ತಂದೆಯ ಪಿಸ್ತೂಲ್ ನಿಂದ ಬಾಲಕ ಗುಂಡಿಕ್ಕಿ ತಾಯಿಯನ್ನು ಹತ್ಯೆ ಮಾಡಿದ್ದಾನೆ. ತಾಯಿಯತ್ತ ಹಲವು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.