ಲಖನೌ: ಬೇರೆಯವರ ಬಟ್ಟೆ ಸ್ವಚ್ಛಗೊಳಿಸಿ ಜೀವನ ನಡೆಸುವ ಕುಟುಂಬ. ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದ ತಂದೆ. ಕಡು ಬಡತನದ ಈ ಕುಟುಂಬದ ಮಗಳು ದೀಪಾಲಿ ಖನೌಜಿಯಾಗೆ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಎಂದರೆ ಕನ್ನಡಿಯೊಳಗಿನ ಗಂಟು ಎಂಬಂತಾಗಿತ್ತು. ಆದರೆ, ಈಗ ಆಕೆ ಅಮೆರಿಕಕ್ಕೆ ಹಾರಲು ಸಿದ್ಧಳಾಗಿದ್ದಾಳೆ.
ಅಮೆರಿಕದ ವಿದೇಶಾಂಗ ಸಚಿವಾಲಯದ ಕೆನಡಿ–ಲೂಗರ್ ಯುವಜನ ವಿನಿಮಯ ಮತ್ತು ಅಧ್ಯಯನ (ಯೆಸ್) ವಿದ್ಯಾರ್ಥಿವೇತನ ಪಡೆಯುವಲ್ಲಿ 16 ವರ್ಷ ದೀಪಾಲಿ ಸಫಲವಾಗಿದ್ದಾಳೆ. ‘ಬಡತನ, ಹಾಸಿಗೆ ಹಿಡಿದ ತಂದೆಯ ಸ್ಥಿತಿ ಹಾಗೂ ಕುಟುಂಬದ ಹೊಟ್ಟೆ ತುಂಬಿಸುತ್ತಿರುವ ತಾಯಿಯ ಹೋರಾಟದ ಬದುಕೇ ತನಗೆ ಸ್ಪೂರ್ತಿ. ಮುಂದೇನು ಮಾಡಬೇಕು ಎಂದು ನಿರ್ಧರಿಸುವಲ್ಲಿ ಇವೇ ನನಗೆ ಸ್ಪಷ್ಟತೆ ನೀಡಿದವು’ ಎನ್ನುತ್ತಾಳೆ ದೀಪಾಲಿ.
ತಾಯಿ ಸುಮನಾ ಅವರಿಗೆ ಮಗಳು ಅಮೆರಿಕಕ್ಕೆ ಹೋಗುತ್ತಿರುವುದು ಅತೀವ ಸಂತಸ ತಂದಿದೆ. ಮಾತನಾಡಿಸಿದರೆ, ಮಗಳ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸುತ್ತಾರೆ. ‘ಅಮೆರಿಕದಲ್ಲಿ ಓದಲು ನನ್ನ ಮಗಳು ಆಯ್ಕೆಯಾಗಿದ್ದಾಳೆ. ಅಮೆರಿಕ ಹೇಗಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ನನ್ನ ಮಗಳು ಚೆನ್ನಾಗಿ ಓದುತ್ತಾಳೆ ಅಂತ ಗೊತ್ತು’ ಎನ್ನುತ್ತಾರೆ ಅವರು. ಸುಮನಾ ದಂಪತಿಗೆ ನಾಲ್ವರು ಮಕ್ಕಳು. ನಾಲ್ಕನೇ ಮಗಳಾದ ದೀಪಾಲಿ. ಈಗ 10ನೇ ತರಗತಿ ಓದುತ್ತಿದ್ದಾಳೆ. ಆಗಸ್ಟ್‌ನಲ್ಲಿ ಅಮೆರಿಕಕ್ಕೆ ಹಾರಲಿದ್ದಾಳೆ.
‘ನನ್ನ ತಾಯಿಯೇ ನನಗೆ ಪ್ರೇರಣೆ’ ಎನ್ನುತ್ತಾಳೆ ದೀಪಾಲಿ. ‘ಇಂದಿನವರೆಗೂ ನನ್ನ ತಾಯಿ ಈ ಕುಟುಂಬಕ್ಕಾಗಿ ಹೇಗೆಲ್ಲಾ ಕಷ್ಟಪಡುತ್ತಾರೆ ಎಂದು ನೋಡಿದ್ದೇನೆ. ಆಕೆಗೆ ಅಷ್ಟಾಗಿ ಓದಲು ಬರೆಯಲು ಬರುವುದಿಲ್ಲ. ಆದರೆ, ಆಕೆ ಶಿಕ್ಷಣದ ಮೌಲ್ಯವನ್ನು ನನಗೆ ತಿಳಿ ಹೇಳಿದ್ದಾಳೆ’ ಎಂಬುದು ದೀಪಾಲಿ ಮಾತು.
‘ನನಗೆ ಡಾಕ್ಟರ್ ಆಗುವ ಆಸೆ ಇದೆ. ಪಿಯುಸಿಯಲ್ಲಿ ನಾನು ವಿಜ್ಞಾನ ಓದುತ್ತೇನೆ. ನಂತರ ನೀಟ್ ಬರೆಯುತ್ತೇನೆ. ಒಂದು ವರ್ಷದ ಅವಧಿಗೆ ನಾನು ಅಮೆರಿಕಕ್ಕೆ ಹೋಗುತ್ತಿದ್ದೇನೆ. ನಾನು ಎಂದೂ ಒಬ್ಬಳೆ ಇದ್ದವಳಲ್ಲ. ಆದರೆ, ಅಲ್ಲಿಗೆ ಹೋಗಿ ಎಲ್ಲ ಕಲಿಯುತ್ತೇನೆ. ಬದುಕಿಗೆ, ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಕೌಶಲವನ್ನೂ ಅಲ್ಲಿ ಕಲಿಯುತ್ತೇನೆ’ ಎಂದು ದೀಪಾಲಿ ವಿಶ್ವಾಸ ವ್ಯಕ್ತಪಡಿಸಿದಳು.
ದೀಪಾಲಿ ಓದಿದ್ದು, ‘ಪ್ರೇರಣಾ ಗಲ್ಸ್ ಶಾಲೆ’ಯಲ್ಲಿ. ಸ್ಟಡಿ ಹಾಲ್ ಎಜುಕೇಷನ್ ಫೌಂಡೇಷನ್‌ನ ಶಾಲೆಯಿದು. ದುರ್ಬಲ ಸಮುದಾಯ ಹಾಗೂ ಕಡಿಮೆ ಆದಾಯ ಹೊಂದಿರುವ ಜನರಿಗಾಗಿಯೇ ಈ ಶಾಲೆಯನ್ನು ತೆರೆಯಲಾಗಿದೆ. ಒಂದೇ ವರ್ಷದ ಒಳಗೆ, ದೀಪಾಲಿಯು ತನ್ನ ಪರಿಶ್ರಮದಿಂದ ಉತ್ತಮ ಅಂಕ ಪಡೆದು, ಶಾಲೆಯಲ್ಲಿ ವಿದ್ಯಾರ್ಥಿ ವೇತನವನ್ನೂ ಪಡೆದುಕೊಂಡಳು.
ನನಗೆ ‘ಯೆಸ್’ ವಿದ್ಯಾರ್ಥಿ ವೇತನ ದೊರೆಯುತ್ತದೆ ಎಂಬ ವಿಶ್ವಾಸ ಇರಲಿಲ್ಲ. ಆದರೆ, ನನ್ನ ಗುರುಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು.–ದೀಪಾಲಿ ಖನೌಜಿಯಾ, ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.