ಲಖನೌ: ನೀರಾನೆ (hippopotamus) ದಾಳಿಯಿಂದ ಮೃಗಾಲಯದ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌದ ‘ನವಾಬ್ ವಾಜಿದ್ ಅಲಿ ಷಾ’ ವನ್ಯಜೀವಿಧಾಮದಲ್ಲಿ ಸೋಮವಾರ ನಡೆದಿದೆ.
ಮೃತನನ್ನು ಸೂರಜ್ ಎಂದು ಗುರುತಿಸಲಾಗಿದೆ.
ಸೋಮವಾರ ಮೃಗಾಲಯಕ್ಕೆ ರಜೆ ಇತ್ತು. ಹೀಗಾಗಿ ನೀರಾನೆ ಇದ್ದ ಜಾಗವನ್ನು ಸ್ವಚ್ಛ ಮಾಡಲು ಬೆಳಿಗ್ಗೆ 10.30 ರ ಸುಮಾರಿಗೆ ಸೂರಜ್ ಹೋಗಿದ್ದರು. ಈ ವೇಳೆ ಸೂರಜ್ ಅವರ ಮೇಲೆ ನೀರಾನೆ ದಾಳಿ ಮಾಡಿತ್ತು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ವನ್ಯಜೀವಿಧಾಮದ ನಿರ್ದೇಶಕರು ತಿಳಿಸಿದ್ದಾರೆ.
ಸೂರಜ್ ಈ ಮೃಗಾಲಯದಲ್ಲಿ 2013 ರಿಂದ ಕೆಲಸ ಮಾಡುತ್ತಿದ್ದರು. ಮೃತ ಸೂರಜ್ ಕುಟುಂಬದವರಿಗೆ ₹ 50 ಸಾವಿರ ತಕ್ಷಣದ ಪರಿಹಾರ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.