ADVERTISEMENT

ಚಂದ್ರಯಾನ–2: ನೌಕೆ ಇಳಿಯುವ ಕೊನೆಯ 15 ನಿಮಿಷ ರೋಚಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
   

ಶ್ರೀಹರಿಕೋಟಾ: ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ–2 ನೌಕೆ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿವೆ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.

ಉಡ್ಡಯನಗೊಂಡ 48ನೇ ದಿನದಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ. ‘ಸಾಫ್ಟ್‌ ಲ್ಯಾಂಡಿಂಗ್’ ಬಹು ನಾಜೂಕು ಕೆಲಸವಾಗಿದ್ದು, ನೌಕೆ ಇಳಿಸುವ ಕೊನೆಯ ಹಂತದ 15 ನಿಮಿಷಗಳು ನಮ್ಮ ಪಾಲಿಗೆ ನಿರ್ಣಾಯಕ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ಶಿವನ್ ಹೇಳಿದ್ದಾರೆ.

ಸುರಕ್ಷಿತವಾಗಿ ನೌಕೆ ಇಳಿಸುವುದು ಹಾಗೂ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು – ಈ ಎರಡೂ ಇಸ್ರೊ ಪಾಲಿಗೆ ಮೊದಲ ಯತ್ನಗಳು. ಹೀಗಾಗಿ ನೌಕೆ ಇಳಿಯುವ ಕೊನೆಯ ಕ್ಷಣಗಳ ಬಗ್ಗೆ ಇಸ್ರೊ ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

ADVERTISEMENT

ಕಳೆದ ವಾರ ಉಡ್ಡಯನಕ್ಕೂ ಮುನ್ನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ ಇಡೀ ಇಸ್ರೊ ತಂಡ ಕಾರ್ಯಾಚರಣೆಗೆ ಇಳಿದು 24 ಗಂಟೆಗಳಲ್ಲಿ ಸಮಸ್ಯೆ ಸರಿಪಡಿಸಿತು. ಅಚ್ಚರಿ ರೀತಿಯಲ್ಲಿ ಕೆಲಸ ಮಾಡಿ ದೋಷ ಪತ್ತೆಹಚ್ಚಿ, ರಾಕೆಟ್ ಅನ್ನು ಪುನಃ ಉಡ್ಡಯನಕ್ಕೆ ಸಜ್ಜುಗೊಳಿಸಿದ್ದನ್ನು ಶಿವನ್ ಸ್ಮರಿಸಿದರು.

‘ಮುಂದಿನ ಒಂದೂವರೆ ದಿನಗಳಲ್ಲಿ ಅಗತ್ಯವಿದ್ದ ಸರಣಿ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ವಾಹನವನ್ನು ಉಡ್ಡಯನಕ್ಕೆ ಸಿದ್ಧಪಡಿಸಲಾಯಿತು. ಮಾರ್ಕ್‌III ವಾಹನದ ಕಾರ್ಯಕ್ಷಮತೆ ಹಿಂದಿಗಿಂತ ಶೇ 15ರಷ್ಟು ಹೆಚ್ಚಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.