ADVERTISEMENT

ಪ್ರವಾಸೋದ್ಯಮದ ಪುನಃಶ್ಚೇತನಕ್ಕೆ ಮುಂದಾದ ಗೋವಾ

ಎ.ಎಂ.ಸುರೇಶ
Published 11 ಜನವರಿ 2024, 20:38 IST
Last Updated 11 ಜನವರಿ 2024, 20:38 IST
ಗೋವಾ ಬೀಚ್,– ಸಾಂದರ್ಭಿಕ ಚಿತ್ರ
ಗೋವಾ ಬೀಚ್,– ಸಾಂದರ್ಭಿಕ ಚಿತ್ರ   

ಪಣಜಿ: ಗೋವಾ ವಿಮೋಚನೆಯ 62ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರವಾಸೋದ್ಯಮದ ಪುನಃಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಪರಿಸರ, ಸಂಸ್ಕೃತಿಯ ರಕ್ಷಣೆ ಜೊತೆಗೆ ಸ್ಥಳೀಯ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇಡೀ ವಿಶ್ವವನ್ನು ಕಾಡಿದ ಕೋವಿಡ್‌, ರಷ್ಯಾ–ಉಕ್ರೇನ್‌ ಯುದ್ಧ, ಇಸ್ರೇಲ್‌–ಹಮಾಸ್‌ ಸಂಘರ್ಷ, ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಿಸುತ್ತಿರುವ ಸ್ಪರ್ಧೆಯಿಂದಾಗಿ ಗೋವಾಗೆ ಬರುವ ಪ್ರವಾಸಿಗರ ಸಂಖ್ಯೆ ಈಚೆಗೆ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟು ಪ್ರವಾಸೋದ್ಯಮ ವಲಯದಲ್ಲಿ ಬದಲಾವಣೆ ತರಲು ಗೋವಾ ಸರ್ಕಾರ ಮುಂದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ರೋಹನ್‌ ಕೌಂಟಿ, ’ಕರಾವಳಿ ಭಾಗದ ಪರಿಸರ ಸಂರಕ್ಷಣೆಯ ಜೊತೆಗೆ ಗೋವಾದ ಸ್ಥಳೀಯ ಜನತೆಯ ಸಬಲೀಕರಣ, ಇಲ್ಲಿನ ಐತಿಹಾಸಿಕವಾದ 11 ಧಾರ್ಮಿಕ ಸ್ಥಳಗಳತ್ತ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ‘ ಎಂದರು.

ADVERTISEMENT

ಏಕದಶ ತೀರ್ಥ: ಇಷ್ಟು ದಿನ ಬೀಚ್‌ಗಳತ್ತ ಪ್ರವಾಸಿಗಳನ್ನು ಸೆಳೆಯಲು ಹೆಚ್ಚು ಒತ್ತು ನೀಡಲಾಗಿತ್ತು. ಆದರೆ, ಇನ್ನು ಮುಂದೆ ಏಕದಶ ತೀರ್ಥ ಕಾರ್ಯಕ್ರಮದಡಿ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರಗಳತ್ತ ಪ್ರವಾಸಿಗರನ್ನು ಆಕರ್ಷಿಸುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ವಿವರಿಸಿದರು.

ಗೋವಾ ಪ್ರವಾಸೋದ್ಯಮಕ್ಕೆ ಹೆಸರಾಗಿದ್ದು, ಕೋವಿಡ್‌ಗೆ ಮುಂಚೆ ಪ್ರತಿ ವರ್ಷ ಒಂದು ಕೋಟಿಗೂ ಅಧಿಕ ದೇಶಿಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತಿದ್ದರು. ಇದರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೇ 10 ಲಕ್ಷ ಇತ್ತು. ಆದರೆ, ಕೋವಿಡ್‌ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಸುನಿಲ್‌ ಅಂಚಿಪಾಕ ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕದ ಜೊತೆಗೆ ಥಾಯ್ಲೆಂಡ್‌, ಬ್ಯಾಂಕಾಕ್‌, ಇಂಡೊನೇಷ್ಯಾ, ಕೌಲಾಲಂಪುರ ಮೊದಲಾದ ಪ್ರವಾಸಿ ತಾಣಗಳೊಂದಿಗೆ ನಾವು ಸ್ಪರ್ಧೆ ಎದುರಿಸಬೇಕಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪುನಶ್ಚೇತನಗೊಳಿಸಲು ಮುಂದಾಗಿದ್ದೇವೆ. ಅಡ್ವೆಂಚರ್‌ ಟೂರಿಸಂ, ಸ್ಫೋಟ್ಸ್‌ ಟೂರಿಸಂಗೆ ಉತ್ತೇಜನ ನೀಡಲು ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.

ಒಟ್ಟು ದೇಶಿಯಾ ಉತ್ಪನ್ನಕ್ಕೆ (ಜಿಡಿಪಿ) ಪ್ರವಾಸೋದ್ಯಮದ ಕೊಡುಗೆ ಸದ್ಯ ಶೇ 16.4ರಷ್ಟು ಇದ್ದು, ಮೂರು ವರ್ಷಗಳಲ್ಲಿ ಇದನ್ನು 24ಕ್ಕೆ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಗೋವಾದಲ್ಲಿ 130ಕ್ಕೂ ಅಧಿಕ ಯುವ ಕ್ಲಬ್‌ಗಳು ಇದ್ದು, ಅವುಗಳ ಮೂಲಕ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರಚಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಪರೋಕ್ಷವಾಗಿ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.