ADVERTISEMENT

ಔಡಿ ಕಾರಿಗೆ ಕೆಂಪು ದೀಪ ಅಳವಡಿಕೆ: ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಕಾರು ಜಪ್ತಿ

ಪಿಟಿಐ
Published 14 ಜುಲೈ 2024, 13:45 IST
Last Updated 14 ಜುಲೈ 2024, 13:45 IST
ಪೂಜಾ ಖೇಡ್ಕರ್‌
ಪೂಜಾ ಖೇಡ್ಕರ್‌   

ಪುಣೆ: ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ ಅವರು ಬಳಸುತ್ತಿದ್ದ ಐಷಾರಾಮಿ ಔಡಿ ಕಾರನ್ನು ಪುಣೆ ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.

34 ವರ್ಷದ ಖೇಡ್ಕರ್‌ ಅವರು ತಮ್ಮ ಔಡಿ ಕಾರಿನ ಮೇಲೆ ಅಕ್ರಮವಾಗಿ ಕೆಂಪು ದೀಪವನ್ನು ಅಳವಡಿಸಿ, ‘ಮಹಾರಾಷ್ಟ್ರ ಸರ್ಕಾರ’ ಎಂದು ನಾಮಫಲಕ ಅಳವಡಿಸಿಕೊಂಡಿದ್ದರು. ಈ ಸಂಬಂಧ ಪುಣೆಯ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗುರುವಾರ ನೋಟಿಸ್‌ ಜಾರಿಗೊಳಿಸಿತ್ತು.

‘ಖೇಡ್ಕರ್‌ ಅವರು ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಲಾಗಿದ್ದು, ಅದರ ದಾಖಲೆಗಳನ್ನು ಪರಿಶೀಲಿಸಲಿದ್ದೇವೆ. ಅಲ್ಲದೆ, ಈ ಕುರಿತು ಹೆಚ್ಚಿನ ತನಿಖೆ ನಡೆಸಲಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರಿಗೆ ಜಾಮರ್‌ ಹಾಕಲಾಗಿದ್ದು, ಸುತ್ತಲೂ ಬ್ಯಾರಿಕೇಡ್‌ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ADVERTISEMENT

₹27,000 ದಂಡ: ಪುಣೆ ಆರ್‌ಟಿಒದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಆರೋಪದಡಿ ಈ ಔಡಿ ಕಾರಿನ ವಿರುದ್ಧ ಒಟ್ಟು ₹27,000 ದಂಡ ವಿಧಿಸಲಾಗಿತ್ತು. ಆ ಮೊತ್ತ ಪಾವತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಖೇಡ್ಕರ್‌ ಅವರು ಐಎಎಸ್‌ ಸೇವೆಗೆ ಸೇರ್ಪಡೆಗೊಳ್ಳುವ ವೇಳೆ ಇತರೆ ಹಿಂದುಳಿದ ವರ್ಗ– ಅಂಗವಿಕಲ ಕೋಟಾ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದರ ಬೆನ್ನಲ್ಲೇ ಅವರು ಸೇವೆಗೆ ಆಯ್ಕೆಯಾದದ್ದು ಸಮರ್ಪಕವಾಗಿ ಇದೆಯೇ ಎನ್ನುವುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಗುರುವಾರ ಏಕಸದಸ್ಯ ಸಮಿತಿಯನ್ನೂ ರಚಿಸಿದೆ. ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ಹೇಳಿದೆ. ಈ ಪ್ರಕರಣದಲ್ಲಿ ಖೇಡ್ಕರ್‌ ಅವರು ತಪ್ಪಿತಸ್ಥೆ ಎಂದು ಸಾಬೀತಾದರೆ, ಸೇವೆಯಿಂದ ವಜಾಗೊಳ್ಳಬಹುದು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.