ನವದೆಹಲಿ: ತಾಮ್ರ ಕರಗಿಸುವುದಲ್ಲಿ ನಾನೇನೂ ನಿಷ್ಣಾತ ಅಲ್ಲ, ಆದರೆ ಭಾರತದಲ್ಲಿತಾಮ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.ನಾವು ನಮ್ಮ ದೇಶದಲ್ಲೇ ಇದನ್ನು ಉತ್ಪಾದಿಸದೆ ಹೋದರೆ ಚೀನಾದಿಂದ ಖರೀದಿ ಮಾಡಬೇಕಾಗಿ ಬರುತ್ತದೆ.ಪರಿಸರ ನಾಶದ ವಿಚಾರವನ್ನು ಕಾನೂನು ರೀತಿಯಲ್ಲಿ ನೋಡೋಣ. ಬೃಹತ್ ಉದ್ಯಮದಕಡಿತದಿಂದಾಗಿ ಆರ್ಥಿಕ ವ್ಯವಸ್ಥೆಗೆ ಹೊಡೆತವುಂಟಾಗುತ್ತದೆ ಎಂದು ಸದ್ಗುರುಜಗ್ಗಿ ವಾಸುದೇವ್ ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟೆರ್‌ಲೈಟ್ ತಾಮ್ರ ಸಂಸ್ಕರಣಾ ಘಟಕಕ್ಕೆ ಬೆಂಬಲ ಸೂಚಿಸಿ ಸದ್ಗುರು ಜಗ್ಗಿ ವಾಸುದೇವ್ ಈ ಟ್ವೀಟ್ ಮಾಡಿದ್ದಾರೆ.
ಭಾನುವಾರ ಇಂಗ್ಲಿಷ್ ಸುದ್ದಿ ವಾಹಿನಿ ಸಿಎನ್ಎನ್ ನ್ಯೂಸ್ 18 ಸಂಸ್ಥೆಯ ಝಕ್ಕಾ ಜೇಕಬ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸದ್ಗುರು ಸ್ಟೆರ್‌ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಬೆಂಬಲಿಸಿ ಮಾತನಾಡಿದ್ದರು ಎಂದು ದ ನ್ಯೂಸ್ ಮಿನಿಟ್ ವರದಿ ಮಾಡಿದೆ.ಸದ್ಗುರು ಮಾತಿಗೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದರು. ಇದಾದ ನಂತರ ವೇದಾಂತ ಕಂಪನಿಯನ್ನು ಬೆಂಬಲಿಸಿ ಸದ್ಗುರು ಈ ರೀತಿ ಟ್ವೀಟಿಸಿದ್ದಾರೆ.
ಸ್ಟೆರ್‌ಲೈಟ್ ತಾಮ್ರ ಸಂಸ್ಕರಣಾ ಘಟಕದ ವಿರುದ್ಧದ ಪ್ರತಿಭಟನೆ ಬಗ್ಗೆ ಸಂದರ್ಶನದಲ್ಲಿ ಕೇಳಿದಾಗ, ಜಗ್ಗಿ ವಾಸುದೇವ್ ಅವರ ಉತ್ತರ ಹೀಗಿತ್ತು . "ರಾಜಕೀಯ ಒತ್ತಡದಿಂದ ಕೈಗಾರಿಕಾ ಘಟಕವೊಂದನ್ನು ನೀವು ಮುಚ್ಚಿಸುತ್ತೀರಿ, ಅದು ಸರಿಯಲ್ಲ. ಮಾಲಿನ್ಯವುಂಟಾಗದಂತೆ ನೋಡಿಕೊಳ್ಳಿ ಎಂದು ಕೈಗಾರಿಕಾ ಘಟಕಕ್ಕೆ ಹೇಳಿದರೂ ಅದು ಸಾಧ್ಯವಾಗುವ ಮಾತಲ್.ಇದೆಲ್ಲದಕ್ಕೂ ಬೇರೆ ದಾರಿಗಳಿವೆ. ನೀವು ಈ ರೀತಿ ಒಂದೊಂದೇ ಕೈಗಾರಿಕೋದ್ಯಮವನ್ನು ಮುಚ್ಚುತ್ತಾ ಹೋದರೆ ದೇಶದ ಗತಿಯೇನು? ಎಂದಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಯೋಗ ಗುರು ಬಾಬಾ ರಾಮ್‌ದೇವ್ ವೇದಾಂತ್ ಕಂಪನಿಯ ಎಕ್ಸಿಕ್ಯೂಟಿವ್ ಚೇರ್‍ಮೆನ್ ಜತೆ ಸಭೆ ನಡೆಸಿದ ನಂತರ ಸ್ಟೆರ್‌ಲೈಟ್ ಬೆಂಬಲಿಸಿ ಟ್ವೀಟ್ ಮಾಡಿದ್ದರು.
ಆದಾಗ್ಯೂ ಸ್ಟೆರ್‌ಲೈಟ್‌ನಿಂದಾಗಿ ಉಂಟಾಗುವ ವಾಯು ಮಾಲಿನ್ಯದ ಬಗ್ಗೆ ಜಗ್ಗಿ ವಾಸುದೇವ್ ಆಗಲೀ, ರಾಮ್‍ದೇವ್ ಆಗಲೀ ತಮ್ಮ ಟ್ವೀಟ್‍ನಲ್ಲಿ ಉಲ್ಲೇಖಿಸಿಲ್ಲ.ಅಷ್ಟೇ ಅಲ್ಲದೆ ಪ್ರಸ್ತುತ ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗೋಲೀಬಾರ್ ನಡೆಸಿ 13 ಮಂದಿ ಮೃತಪಟ್ಟ ವಿಷಯದ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ.
ಜಗ್ಗಿ ವಾಸುದೇವ್ ಅವರ ಈಶಾ ಪ್ರತಿಷ್ಠಾನ ಕೊಯಮತ್ತೂರಿನಲ್ಲಿ ಆದಿ ಶಿವನ ಪ್ರತಿಮೆ ನಿರ್ಮಿಸಲು ಅನುಮತಿ ಪಡೆದಿಲ್ಲ ಮತ್ತು ಅಲ್ಲಿರುವ ಕಟ್ಟಡ ಅನಧಿಕೃತ ಎಂದು ನಗರ ಯೋಜನೆ ನಿರ್ದೇಶನಾಲಯ (ಡಿಟಿಸಿಪಿ) ದೂರು ನೀಡಿತ್ತು.
ಇಕ್ಕರೈ ಬೊಲುವಂಪತ್ತಿ ಗ್ರಾಮದ ಒದ್ದೆ ಭೂಮಿಯನ್ನು ಮರಳಿ ಪಡೆಯುವುದಕ್ಕಾಗಿ ಅನಧಿಕೃತವಾಗಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ 112 ಅಡಿ ಎತ್ತರದ ಶಿವನ ಮೂರ್ತಿಯನ್ನು ಕೆಡವ ಬೇಕೆಂದು ವಿಲ್ಲಿಂಗಿರಿ ಬೆಟ್ಟ ಬುಡಕಟ್ಟು ಸಂರಕ್ಷಣಾ ಸಮಿತಿ ಒತ್ತಾಯಿಸಿತ್ತು. ಆದಾಗ್ಯೂ, ಮೂರ್ತಿಯನ್ನು ಕೆಡವಲು ಈಶಾ ಪ್ರತಿಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ನೋಟಿಸ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇತ್ತ ಪ್ರಾಣಿ ಸಂರಕ್ಷಣಾ ಸಮಿತಿಯವರೂ ಇಶಾ ಪ್ರತಿಷ್ಠಾನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.ರಾಜ್ಯದ ಪಶ್ಚಿಮ ಭಾಗದಲ್ಲಿರುವ ಆನೆ ಪಥಕ್ಕೆ (ಎಲಿಫೆಂಟ್ ಕಾರಿಡಾರ್) ಈಶಾ ಫೌಂಡೇಶನ್‌ನಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಿಂದ ಹಾನಿಯಾಗಿದೆ ಎಂದು ಪ್ರಾಣಿ ಸಂರಕ್ಷಣಾ ಸಮಿತಿಯವರು ಆರೋಪಿದ್ದಾರೆ. ಆದರೆ ಅಲ್ಲಿ ಯಾವುದೇ ಆನೆ ಪಥ ಇಲ್ಲ. ಹಾಗಾಗಿ ಈ ಆರೋಪ ಸತ್ಯಕ್ಕೆ ದೂರ ಎಂದು ಜಗ್ಗಿ ವಾದಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.