ನಾಗ್ಪುರ್: ಗುಂಪು ಹಲ್ಲೆ ಎಂಬುದು ನಮ್ಮ ದೇಶದ್ದು ಅಲ್ಲ, ಇದು ವಿದೇಶದ್ದು. ದೇಶಕ್ಕೆ ಅಪಖ್ಯಾತಿ ತರಲು ಗುಂಪು ಹಲ್ಲೆ ಪ್ರಕರಣಗಳನ್ನು ಬಳಸಬೇಡಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರ್‌ನಲ್ಲಿ ಮಂಗಳವಾರ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ನಿರ್ದಿಷ್ಟ ಸಮುದಾಯವೊಂದರ ಮೇಲೆ ಗುಂಪು ಹಲ್ಲೆ ನಡೆಯುತ್ತಿಲ್ಲ. ಇದರ ವ್ಯತಿರಿಕ್ತವಾದ ಪ್ರಕರಣಗಳೂ ನಡೆಯುತ್ತಿರುತ್ತವೆ. ಯಾವುದೇ ವಿಚಾರಗಳಲ್ಲಿ ಭಿನ್ನತೆ ಇದ್ದರೂ, ಪ್ರಚೋದನಾಕಾರಿ ಕೃತ್ಯಗಳಾದರೂ ನಮ್ಮ ಸಂವಿಧಾನದ ಚೌಕಟ್ಟಿನಲ್ಲಿರಲು ಸಮಾಜ ಯತ್ನಿಸಬೇಕು ಎಂದಿದ್ದಾರೆ ಭಾಗವತ್.
ಒಂದು ಸಮುದಾಯದ ವ್ಯಕ್ತಿಗಳು ಇನ್ನೊಂದು ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದರು ಎಂಬುದನ್ನು ನಾವು ಕೇಳುತ್ತಿರುತ್ತೇನೆ. ನಿರ್ದಿಷ್ಟ ಸಮುದಾಯವೊಂದು ಆ ಜನರ ಮೇಲೆ ಹಲ್ಲೆ ನಡೆಸುತ್ತದೆ ಎಂಬುದಲ್ಲ.ಅದರ ವ್ಯತಿರಿಕ್ತವಾದ ಘಟನೆಯೂ ನಡೆಯುತ್ತದೆ. ಕೆಲವೊಂದು ಪ್ರಕರಣಗಳನ್ನು ತಿರುಚಲಾಗುತ್ತದೆ. ಸ್ವಹಿತಾಸಕ್ತಿ ಶಕ್ತಿಗಳು ಸಮುದಾಯಗಳ ನಡುವೆ ಬೆಂಕಿ ಹಚ್ಚುವುದಕ್ಕಾಗಿ ನಿರ್ದಿಷ್ಟ ಸಮುದಾಯವನ್ನು ದೂರುತ್ತವೆ.
ಕೆಲವು ಸಾಮಾಜಿಕ ಹಿಂಸಾಚಾರ ಘಟನೆಗಳನ್ನು ಗುಂಪುಹಲ್ಲೆ ಎಂದು ಮುದ್ರೆಯೊತ್ತುವುದರಿಂದ ದೇಶಕ್ಕೆ ಮತ್ತು ಹಿಂದೂ ಸಮಾಜಕ್ಕೆ ಅಪಖ್ಯಾತಿಯುಂಟಾಗುತ್ತದೆ. ಇದು ಕೆಲವೊಂದು ಸಮುದಾಯಗಳಲ್ಲಿ ಭಯ ಸೃಷ್ಟಿಸುತ್ತದೆ. ಗುಂಪುಹಲ್ಲೆ ಎಂಬುದು ಭಾರತಕ್ಕೆ ಪರಕೀಯವಾದುದು, ಅದು ಹೊರದೇಶದ್ದು. ಈ ಪದ ಭಾರತದ್ದು ಅಲ್ಲ. ಈ ಪದದ ಮೂಲ ಧರ್ಮಕ್ಕೆ ಸಂಬಂಧಪಟ್ಟ ವಿಷಯದಿಂದ ಜನಿತವಾದುದು. ಈ ರೀತಿಯ ಪದಗಳನ್ನು ಭಾರತೀಯರ ಮೇಲೆ ಹೇರಬೇಡಿ ಎಂದು ಭಾಗವತ್ ಒತ್ತಾಯಿಸಿದ್ದಾರೆ.
ಗುಂಪು ಹಲ್ಲೆ ಪ್ರಕರಣಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಭಾಗವತ್, ಜನರು ಸಾಮರಸ್ಯದಿಂದ ಬಾಳಲು ಕರೆ ನೀಡಿದ್ದಾರೆ. ಅದೇ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರು ಸಂಸ್ಕಾರದೊಂದಿಗೆ ಬೆಳೆದವರು ಎಂದಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ಇನ್ನಿಲ್ಲದಂತೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದ ಭಾಗವತ್,ಭಾರತ ಮತ್ತು ವಿಶ್ವದಲ್ಲಿ ಹಲವಾರು ಮಂದಿ ಇದನ್ನೇ ಬಯಸಿದ್ದರು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.