ADVERTISEMENT

ಕಛತೀವು ಬಿಟ್ಟುಕೊಡಲು ಕರುಣಾನಿಧಿ ಒಪ್ಪಿದ್ದರು: ಕಣ್ಣನ್‌ ಕೃತಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:01 IST
Last Updated 14 ಆಗಸ್ಟ್ 2024, 16:01 IST
ಎಂ.ಕರುಣಾನಿಧಿ
ಎಂ.ಕರುಣಾನಿಧಿ   

ಚೆನ್ನೈ: ‘ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಆಗ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ ಖಾಸಗಿಯಾಗಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಸಾರ್ವಜನಿಕವಾಗಿ ಈ ನಿರ್ಧಾರವನ್ನು ವಿರೋಧಿಸುತ್ತಿದ್ದರು’ ಎಂದು ವಿಶ್ವಸಂಸ್ಥೆಯ ಮಾಜಿ ರಾಜತಾಂತ್ರಿಕರೊಬ್ಬರ ನೂತನ ಕೃತಿಯಲ್ಲಿ ಹೇಳಲಾಗಿದೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ, 1974ರ ಜೂನ್‌ನಲ್ಲಿ ಆಗಿನ ವಿದೇಶಾಂಗ ಕಾರ್ಯದರ್ಶಿ ಕೇವಲ್‌ ಸಿಂಗ್‌ ಅವರಿಗೆ ಕರುಣಾನಿಧಿ ತಮ್ಮ ಒಪ್ಪಿಗೆ ಸೂಚಿಸಿದ್ದರು’ ಎಂದು ಮಾಜಿ ರಾಜತಾಂತ್ರಿಕ ಆರ್‌.ಕಣ್ಣನ್ ಅವರ ‘ದಿ ಡಿಎಂಕೆ ಇಯರ್ಸ್‌’ ಎಂಬ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ವಾತಂತ್ರ್ಯ ನಂತರದ ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಕಣ್ಣನ್‌ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ದ್ರಾವಿಡ ಚಳವಳಿ ನಡೆದು ಬಂದ ಹಾದಿಯನ್ನೂ ವಿವರಿಸುವ ಈ ಪುಸ್ತಕವನ್ನು ಪೆಂಗ್ವಿನ್‌ ಸಂಸ್ಥೆ ಪ್ರಕಟಿಸಿದೆ.

ADVERTISEMENT

ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ್ದರೂ, ರಾಜಕೀಯ ಕಾರಣಗಳಿಂದಾಗಿ ಕರುಣಾನಿಧಿ ಅವರು ಬಹಿರಂಗವಾಗಿ ಈ ವಿಚಾರದ ಪರ ನಿಲುವು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕಣ್ಣನ್‌ ವಿವರಿಸಿದ್ದಾರೆ.

‘ಕೇವಲ್‌ ಸಿಂಗ್‌ ಅವರು ವಿದೇಶಾಂಗ ಸಚಿವಾಲಯದ ಇತಿಹಾಸ ವಿಭಾಗದ ನಿರ್ದೇಶಕ ಬಿ.ಕೆ.ಬಸು ಅವರೊಂದಿಗೆ 1974ರ ಜೂನ್‌ 19ರಂದು ಕರುಣಾನಿಧಿ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದರು. ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಕುರಿತು ಅಂದು ಕರುಣಾನಿಧಿ ಅವರ ಒಪ್ಪಿಗೆಯನ್ನು ಪಡೆದುಕೊಂಡಿದ್ದರು’ ಎಂದು ವಿವರಿಸಿದ್ದಾರೆ.

‘ಈ ವಿಚಾರವನ್ನು ಕೇಂದ್ರ ಮತ್ತು ರಾಜ್ಯದ (ತಮಿಳುನಾಡಿನ) ನಡುವಿನ ಸಮಸ್ಯೆ ಎಂಬಂತೆ ಮಾಡಿ, ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಾರದು ಎಂಬ ಬಗ್ಗೆ ಕರುಣಾನಿಧಿ ಅವರಿಂದ ಆಶ್ವಾಸನೆಯನ್ನೂ ಸಿಂಗ್‌ ಪಡೆದಿದ್ದರು’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.