ADVERTISEMENT

ದೇಶಿ ಸ್ಟೆಂಟ್‌ ಗುಣಮಟ್ಟ ವಿದೇಶಿಯಷ್ಟೇ ಉತ್ತಮ

ಏಳು ರಾಷ್ಟ್ರಗಳಲ್ಲಿ ನಡೆಸಿದ ಹೋಲಿಕೆ ಸಮೀಕ್ಷೆಯಿಂದ ದೃಢ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:32 IST
Last Updated 16 ಜೂನ್ 2019, 20:32 IST
ಭಾರತದಲ್ಲಿ ತಯಾರಿಸಲಾದ ಸ್ಟೆಂಟ್‌
ಭಾರತದಲ್ಲಿ ತಯಾರಿಸಲಾದ ಸ್ಟೆಂಟ್‌   

ನವದೆಹಲಿ: ಹೃದಯರೋಗ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದೇಶಿಯವಾಗಿ ಉತ್ಪಾದಿಸಲಾದ ಸ್ಟೆಂಟ್‌ಗಳ ಗುಣಮಟ್ಟವು ವಿಶ್ವದ ಅತ್ಯುತ್ತಮ ಸ್ಟೆಂಟ್‌ಗಳಿಗೆ ಸಮಾನವಾಗಿದೆ ಎಂಬ ಅಂಶ ಯೂರೋಪ್‌ನ ಏಳು ರಾಷ್ಟ್ರಗಳ 23 ಆಸ್ಪತ್ರೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ.

ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ 1,435 ರೋಗಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಶೇ 50ರಷ್ಟು ರೋಗಿಗಳಿಗೆ ‘ಮೇಡ್‌ ಇನ್‌ ಇಂಡಿಯಾ’ ಸ್ಟೆಂಟ್‌ ಅಳವಡಿಸಿದ್ದರೆ, ಉಳಿದವರಿಗೆ ಅತ್ಯುತ್ತಮ ಗುಣಮಟ್ಟದ್ದು ಎಂದು ಪರಿಗಣಿಸಲಾಗಿದ್ದ ಅಮೆರಿಕ ಉತ್ಪಾದನೆಯ ಸ್ಟೆಂಟ್‌ ಅಳವಡಿಸ
ಲಾಗಿತ್ತು.

12 ತಿಂಗಳ ಬಳಿಕ ಪರೀಕ್ಷಿಸಿದಾಗ ಉಭಯ ಗುಂಪಿನ ರೋಗಿಗಳಲ್ಲಿ ಫಲಿತಾಂಶ ಏಕರೂಪವಾಗಿರುವುದು ಕಂಡುಬಂದಿತ್ತು ಎಂದು ವೈದ್ಯಕೀಯ ಪ್ರಕಟಣೆ ‘ಲಾನ್ಸೆಟ್‌’ನ ಇತ್ತೀಚಿನ ಆವೃತ್ತಿಯಲ್ಲಿ ಹೇಳಲಾಗಿದೆ.

ADVERTISEMENT

ರಕ್ತನಾಳಗಳಲ್ಲಿ ಹೆಪ್ಪುಗಟ್ಟಿರುವ ರಕ್ತದ ಅಂಶಗಳನ್ನು ತೆರವುಗೊಳಿಸಲು ‘ಸ್ಟೆಂಟ್‌’ ಬಳಸಲಾಗುತ್ತದೆ. ಔಷಧ ಲೇಪಿಸಿದ ಸ್ಟೆಂಟ್‌ಗಳು ಶಸ್ತ್ರಚಿಕಿತ್ಸೆಯ ಬಳಿಕ ರಕ್ತದಸರಾಗ ಚಲನೆಗೆ ಅನುವು ಮಾಡಿಕೊಡುತ್ತವೆ.

ಭಾರತದಲ್ಲಿ ಪ್ರತಿವರ್ಷವೂ 5ಲಕ್ಷಕ್ಕೂ ಅಧಿಕ ಸ್ಟೆಂಟ್‌ಗಳು ಬಳಕೆಯಾಗಲಿವೆ. ಭಾರತೀಯ ಮತ್ತು ವಿದೇಶಿ ಉತ್ಪನ್ನಗಳ ದರದಲ್ಲಿ ಭಾರಿ ವ್ಯತ್ಯಾಸವಿತ್ತು. ಹೆಚ್ಚಿನ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಸ್ಟೆಂಟ್‌ಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ 2017ರಲ್ಲಿ ಸ್ಟೆಂಟ್‌ಗಳನ್ನು ದರ ನಿಯಂತ್ರಣ ಪರಿಧಿಗೆ ಒಳಪಡಿಸಿತ್ತು.

ಆದರೆ, ಕೆಲ ವಿದೇಶಿ ಉತ್ಪಾದನಾ ಸಂಸ್ಥೆಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳು, ‘ಆಮದು ಮಾಡಿದ ಸ್ಟೆಂಟ್‌ಗಳ ಗುಣಮಟ್ಟವು ದೇಶಿ ಸ್ಟೆಂಟ್‌ಗಳಿಗಿಂತ ಉತ್ತಮವಾಗಿರುತ್ತದೆ’ ಎಂದು ವಾದಿಸುತ್ತಿದ್ದವು. ನೆದರ್‌ಲೆಂಡ್ಸ್‌, ಪೋಲೆಂಡ್‌, ಅಮೆರಿಕ, ಸ್ಪೇನ್, ಬಲ್ಗೇರಿಯ, ಹಂಗರಿ, ಇಟಲಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬಂದಿದೆ.

‘ಸುಪ್ರಫ್ಲೆಕ್ಸ್‌’ ಹೆಸರಿನ ದೇಶಿ ಸ್ಟೆಂಟ್‌ ಅನ್ನು ಸೂರತ್‌ ಮೂಲದ ಸಹಜಾನಂದ್‌ ಮೆಡಿಕಲ್‌ ಟೆಕ್ನಾಲಜಿ ಕಂಪನಿ ಉತ್ಪಾದಿಸುತ್ತಿದೆ. ಇದರ ಗುಣಮಟ್ಟವನ್ನು ಅಮೆರಿಕದ, ಅಬಾಟ್‌ ಸಂಸ್ಥೆಯು ಉತ್ಪಾದಿಸಿದ ಕ್ಸೀನ್ಸ್‌ ಹೆಸರಿನ ಸ್ಟೆಂಟ್‌ನ ಗುಣಮಟ್ಟದ ಜೊತೆಗೆ ಹೋಲಿಕೆ ಮಾಡಲಾಗಿತ್ತು.

ಅಕ್ಟೋಬರ್‌ 2016ರಿಂದ ಜುಲೈ 2017ರ ನಡುವೆ ಸಮೀಕ್ಷೆ ನಡೆಸಿದ್ದು, 1,435 ರೋಗಿಗಳಿಗೆ ಸ್ಟೆಂಟ್‌ ಅಳವಡಿಸಲಾಗಿತ್ತು. ಇದರಲ್ಲಿ 720 ರೋಗಿಗಳಿಗೆ ಭಾರತೀಯ ಸ್ಟೆಂಟ್‌ ಅಳವಡಿಸಲಾಗಿತ್ತು.

‘ಸುಪ್ರಫ್ಲೆಕ್ಸ್‌ ಸ್ಟೆಂಟ್ ಸುರಕ್ಷಿತ. ಸದ್ಯ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಸ್ಟೆಂಟ್‌ಗೆ ಪರಿಣಾಮಕಾರಿಯಾದ ಪರ್ಯಾಯವಾಗಿದೆ’ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪರಿಣತರು ಅಭಿಪ್ರಾಯಪಟ್ಟರು.

‘ಭಾರತೀಯ ಸ್ಟೆಂಟ್‌ಗಳ ಗುಣಮಟ್ಟವು ಆಮದು ಮಾಡಿಕೊಳ್ಳಲಾದ ಸ್ಟೆಂಟ್‌ಗಳ ಗುಣಮಟ್ಟಕ್ಕೆ ಸಮಾನವಾಗಿದೆ. ಇದರ ಗಾತ್ರ 60 ಮೈಕ್ರಾನ್‌ ಆಗಿದ್ದು, 86 ಮೈಕ್ರಾನ್‌ ಗಾತ್ರದ ಅಮೆರಿಕ ಸ್ಟೆಂಟ್‌ಗಿಂತಲೂ ತೆಳುವಾಗಿದೆ’ ಎಂದು ಸಮೀಕ್ಷೆ ನಡೆಸಿದ ಟ್ಯಾಲೆಂಟ್‌ ಸ್ಟಡಿ ಗ್ರೂಪ್‌ನ ಸಹ ಅಧ್ಯಕ್ಷ ಉಪೇಂದ್ರ ಕೌಲ್‌ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.