ಭೋಪಾಲ್: ಮಧ್ಯಪ್ರದೇಶದಲ್ಲಿ ಗುರು ಆದಿ ಶಂಕರ (ಶಂಕರಾಚಾರ್ಯ) ಅವರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು ₹2,000 ಕೋಟಿ ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 'ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್' ಟ್ರಸ್ಟಿಗಳೊಂದಿಗೆ ಚರ್ಚಿಸಿದ್ದಾರೆ.
ರಾಜ್ಯವು ತೀವ್ರ ಸಾಲದ ಸುಳಿಯಲ್ಲಿರುವುದನ್ನು ಪ್ರಸ್ತಾಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಮುಖಂಡ ಕಮಲ್‌ನಾಥ್, ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇದಕ್ಕೆ ಬಜೆಟ್‌ನಲ್ಲಿ ಹಣ ಮೀಸಲು ಆದ ನಂತರವಷ್ಟೇ ಚರ್ಚಿಸುವುದಾಗಿ ಹೇಳಿದ್ದಾರೆ.
ಹಲವು ಲೋಹಗಳನ್ನು ಬಳಸಿ ಆದಿ ಶಂಕರರ ಪ್ರತಿಮೆ ನಿರ್ಮಿಸಲಾಗುತ್ತದೆ. ಓಂಕಾರೇಶ್ವರದಲ್ಲಿ ಸಂಗ್ರಹಾಲಯ ಹಾಗೂ ಅಂತರರಾಷ್ಟ್ರೀಯ ವೇದಾಂತ ಸಂಸ್ಥಾನವು ರಾಜ್ಯವನ್ನು ಜಗತ್ತಿನೊಂದಿಗೆ ಸಂಪರ್ಕಿಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
'ಏಕತೆಯ ಪ್ರತಿಮೆ' ಎಂದು ಕರೆಯಲಾಗಿರುವ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು 54 ಅಡಿ ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಮಾಂಧಾತ ಗುಡ್ಡದ ಮೇಲೆ ಪ್ರತಿಮೆ ಮತ್ತು 7.5 ಹೆಕ್ಟೇರ್ ಪ್ರದೇಶದಲ್ಲಿ ಶಂಕರ ಮ್ಯೂಸಿಯಂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ನರ್ಮದಾ ನದಿಯ ಮತ್ತೊಂದು ಬದಿಯ 5 ಹೆಕ್ಟೇರ್ ಪ್ರದೇಶದಲ್ಲಿ ಗುರುಕುಲ ನಿರ್ಮಿಸಲಾಗುತ್ತದೆ ಹಾಗೂ ಆಚಾರ್ಯ ಶಂಕರ ಅಂತರರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವು 10 ಹೆಕ್ಟೇರ್ ಪ್ರದೇಶದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಮಧ್ಯಪ್ರದೇಶದ ಒಟ್ಟು ಬಜೆಟ್‌ಗಿಂತಲೂ ಸಾಲದ ಪ್ರಮಾಣವು ಹೆಚ್ಚಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಹೊಸ ಯೋಜನೆ ಪ್ರಕಟಿಸಿದೆ. ರಾಜ್ಯದ ಒಟ್ಟು ಬಜೆಟ್ ಮೊತ್ತ ₹2.41 ಲಕ್ಷ ಕೋಟಿಯಾಗಿದ್ದು, ಒಟ್ಟು ಸಾಲದ ಮೊತ್ತ ₹2.56 ಲಕ್ಷ ಕೋಟಿ ಇದೆ. ರಾಜ್ಯದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಇರುವ ಸಾಲ ಸುಮಾರು ₹34,000 ತಲುಪಿದೆ.
ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. 'ಆಗಲೇ ₹2.56 ಲಕ್ಷ ಕೋಟಿ ಸಾಲದಲ್ಲಿರುವ ರಾಜ್ಯವು ಒಂದಲ್ಲ ಒಂದು ಕಾರಣಗಳಿಗೆ ಮತ್ತೆ ಮತ್ತೆ ಸಾಲ ಮಾಡುತ್ತಿದೆ ಹಾಗೂ ಈಗ ₹48,000 ಕೋಟಿ ಸಾಲ ಮಾಡಲು ನಿರ್ಧರಿಸಿದೆ. ಸರ್ಕಾರವು ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ' ಎಂದು ಕಾಂಗ್ರೆಸ್ ಮಖಂಡ ಜೀತು ಪಟವಾರಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.