ADVERTISEMENT

Madhya Pradesh Election Result: ಮತ್ತೊಮ್ಮೆ ಗೆದ್ದು ಬೀಗಿದ ಬಿಜೆಪಿ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2023, 9:26 IST
Last Updated 3 ಡಿಸೆಂಬರ್ 2023, 9:26 IST
<div class="paragraphs"><p>ಕಾರ್ಯಕರ್ತರೊಂದಿಗೆ&nbsp; ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌</p></div>

ಕಾರ್ಯಕರ್ತರೊಂದಿಗೆ  ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌

   

(ಚಿತ್ರ ಕೃಪೆ–ಪಿಟಿಐ)

ಭೋಪಾಲ: ‌ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್‌’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆದಿದೆ.

ADVERTISEMENT

230 ಸದಸ್ಯರ ಬಲಾಬಲದ ಮಧ್ಯಪ್ರದೇಶದಲ್ಲಿ 19 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಗ್ಯಾರಂಟಿಗಳ ಘೋಷಣೆಯು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಲಿದೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರು. ಆದರೆ, ಕಾಂಗ್ರೆಸ್ಸಿಗರ ನಿರೀಕ್ಷೆ ಹುಸಿಯಾಗಿದೆ.

ಸದ್ಯ ಟ್ರೆಂಡ್‌ ಗಮನಿಸಿದರೆ 166 ಸ್ಥಾನಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದರೆ, ಇತ್ತ 63ರಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಣದಲ್ಲಿದ್ದ ಪ್ರಮುಖ ನಾಯಕರು: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌, ನರೇಂದ್ರ ಸಿಂಗ್‌ ತೋಮರ್‌ ಹಾಗೂ ಮಾಜಿ ಸಿಎಂ ಕಾಂಗ್ರೆಸ್ ನಾಯಕ ಕಮಲನಾಥ್‌ ಅವರು ಕಣಕ್ಕಿಳಿದಿದ್ದರು.

ಮೊದಲ ಜಯ ದಾಖಲಿಸಿದ ಭಾರತ್‌ ಆದಿವಾಸಿ ಪಾರ್ಟಿ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಸೈಲಾನಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಭಾರತ್ ಆದಿವಾಸಿ ಪಾರ್ಟಿ

ತನ್ನ ಮೊದಲ ಜಯ ದಾಖಲಿಸಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಸೈಲಾನಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಮಲೇಶ್ವರ ದೊಡಿಯಾರ್ ಅವರು ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹರ್ಷ ವಿಜಯ್ ಗೆಹಲೋತ್‌ ಅವರನ್ನು 4,618 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸಾರಾಂಶ
  • ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

  • ಮಧ್ಯಪ್ರದೇಶ ಮುಖ್ಯಮಂತ್ರಿ, ಬಿಜೆಪಿ ನಾಯಕ ಶಿವರಾಜ ಸಿಂಗ್‌ ಚೌಹಾಣ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಶರ್ಮಾ ವಿರುದ್ಧ 1,04,974 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸೋತಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  • ಪಕ್ಷದ ಸೋಲಿನ ಬಗ್ಗೆ ಅವಲೋಕನ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕ ಕಮಲನಾಥ್ ಹೇಳಿದ್ದಾರೆ.

  • ಚುನಾವಣೆಯಲ್ಲಾದ ಲೋಪದೋಷಗಳನ್ನು ವಿಶ್ಲೇಷಿಸುತ್ತೇವೆ. ಜತೆಗೆ, ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾಗದ್ದೇವೆ. ಎಲ್ಲರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಕಮಲನಾಥ್ ತಿಳಿಸಿದ್ದಾರೆ.

  • ಮಧ್ಯಪ್ರದೇಶ ವಿಧಾನಸಭೆಯ ಮ್ಯಾಜಿಕ್ ನಂಬರ್ 116.

164 ಸ್ಥಾನಗಳಲ್ಲಿ ಮುನ್ನಡೆ
ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ 65ರಲ್ಲಿ ಗೆದ್ದರೆ, ಭಾರತ್ ಆದಿವಾಸಿ 1 ಸ್ಥಾನ ಗೆದ್ದಿದೆ. ಬಹುಮತಕ್ಕೆ 116.

ಬಿಜೆಪಿ ಕಚೇರಿಯಲ್ಲಿ ಸಂಭ್ರಮ:

ತನ್ನ ಪ್ರತಿಸ್ಪರ್ಧಿ ವಿರುದ್ಧ ಪ್ರಬಲ ಗೆಲುವು ಸಾಧಿಸಿದ ಕೇಸರಿ ಪಡೆ ಭೋಪಾಲದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ. ಪಟಾಕಿಗಳ ಸದ್ದಿನ ನಡುವೆ ಕಾರ್ಯಕರ್ತರು ಡೊಳ್ಳು ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ರಾಜ್ಯ ಮುಖ್ಯಸ್ಥ ವಿ.ಡಿ ಶರ್ಮಾ ಕೂಡ ಭೋಪಾಲದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

ಯಶಸ್ಸಿಗೆ ಪ್ರಧಾನಿ ಕಾರಣ:

ರಾಜ್ಯದ 14 ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಪಕ್ಷದ ಹಲವು ಮುಖಂಡರು ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಕಚೇರಿ ನಿರ್ಜನವಾಗಿ ಗೋಚರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ರಾಜ್ಯ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ಗೆ ಗೆಲುವು:
ಹಾಲಿ ಮುಖ್ಯಮಂತ್ರಿ ಮತ್ತು ಬುಧ್ನಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮ್ ಶರ್ಮಾ ಅವರನ್ನು 64,951 ಮತಗಳ ಅಂತರದಿಂದ ಸೋಲಿಸಿದ್ದಾರೆ.

ನ.17ರಂದು ನಡೆದ ಚುನಾವಣೆಯಲ್ಲಿ ಶೇ 77.82ರಷ್ಟು ಮತದಾನವಾಗಿತ್ತು. 5.59 ಲಕ್ಷ ಅರ್ಹ ಮತದಾರರಿದ್ದು, 230 ಕ್ಷೇತ್ರಗಳಲ್ಲಿ 2,533 ಅಭ್ಯರ್ಥಿಗಳು ಕಣದಲ್ಲಿದ್ದರು.

2018ರಲ್ಲಿ 114 ಸ್ಥಾನಗಳಲ್ಲಿ ಜಯಗಳಿಸಿದ ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ ಮತ್ತು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಿತ್ತು. ಆದರೆ 2020ರ ಮಾರ್ಚ್ ತಿಂಗಳಲ್ಲಿ ಜ್ಯೋತಿರಾದಿತ್ಯ ಬಂಡಾಯವೆದ್ದು 22 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದ ಸಿಎಂ ಕಮಲ್‌ನಾಥ್‌ ಸರ್ಕಾರ ಪತನಗೊಂಡಿತ್ತು. ಮತ್ತೆ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರಕ್ಕೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.