ಭೋಪಾಲ್: ಕಳ್ಳಬಟ್ಟಿ ದಂಧೆ ಪ್ರಕರಣದಲ್ಲಿ ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಲು ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಮಧ್ಯಪ್ರದೇಶದ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಳ್ಳಬಟ್ಟಿಯಿಂದ ಸಾವು ಸಂಭವಿಸಿದಲ್ಲಿ ಜೀವಾವಧಿ ಸಜೆ ಮತ್ತು ತೀವ್ರ ಸ್ವರೂಪದ ದಂಡ ವಿಧಿಸಲು ಆಗುವಂತೆ ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ₹ 20 ಲಕ್ಷದವರೆಗೂ ದಂಡ ವಿಧಿಸುವ ಪ್ರಸ್ತಾವವಿದೆ.
ರಾಜ್ಯ ಶಾಸನಸಭೆ ಒಮ್ಮೆ ಮಸೂದೆಗೆ ಅನುಮೋದನೆ ನೀಡಿ ರಾಜ್ಯಪಾಲರ ಅಂಕಿತ ದೊರೆತಂತೆಯೇ ಇದು ಜಾರಿಗೆ ಬರಲಿದೆ. ಇಂದೋರ್‌ನಲ್ಲಿ ಈಚೆಗೆ ಕಳ್ಳಬಟ್ಟಿ ಸೇವಿಸಿ ಏಳು ಮಂದಿ ಮೃತಪಟ್ಟಿದ್ದರು.
ಸಂಪುಟ ಸಭೆ ನಂತರ ವಿವರ ನೀಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ಮದ್ಯದ ಅಕ್ರಮ ಮಾರಾಟ ಹಾಗೂ ಕಳ್ಳಬಟ್ಟಿ ದಂಧೆಯನ್ನು ಹತ್ತಿಕ್ಕುವುದು ತಿದ್ದುಪಡಿಯ ಉದ್ದೇಶವಾಗಿದೆ. ಕಳ್ಳಬಟ್ಟಿಯಿಂದ ದೈಹಿಕವಾಗಿ ತೊಂದರೆಯಾದಲ್ಲಿ ₹ 10 ಲಕ್ಷದಿಂದ ₹ 14 ಲಕ್ಷವರೆಗೆ ದಂಡ ವಿಧಿಸಲು, ಕನಿಷ್ಠ 5 ರಿಂದ 10 ವರ್ಷದವರೆಗೂ ಸಜೆ ವಿಧಿಸಲು ಅವಕಾಶವಿದೆ. ಸದ್ಯ, ಸಜೆ ಪ್ರಮಾಣ ಕನಿಷ್ಠ 1 ವರ್ಷದಿಂದ ಗರಿಷ್ಠ 6 ವರ್ಷವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.