ADVERTISEMENT

ಕೆಜಿಎಫ್‌ ಚಿತ್ರದಿಂದ ಪ್ರೇರಣೆ?: ನಾಲ್ವರನ್ನು ಕೊಂದಿದ್ದ ಯುವಕ ಸೆರೆ

ಐಎಎನ್ಎಸ್
Published 2 ಸೆಪ್ಟೆಂಬರ್ 2022, 13:39 IST
Last Updated 2 ಸೆಪ್ಟೆಂಬರ್ 2022, 13:39 IST
   

ಭೋಪಾಲ್:ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಭೀಕರವಾಗಿಕೊಂದಿದ್ದ 19 ವರ್ಷದ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶಿವಪ್ರಸಾದ್ ದುರ್ವೆ ಎಂದು ಗುರುತಿಸಲಾಗಿದ್ದು, ಕೆಜಿಎಫ್ ಹೀರೊ ಮಾದರಿಯಲ್ಲಿ ಹೆಸರುವಾಸಿಯಾಗಲು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಸೆಕ್ಯುರಿಟಿ ಗಾರ್ಡ್‌ಗಳು ಮಲಗಿದ್ದ ಸಂದರ್ಭ ಶಿವಪ್ರಸಾದ್ ಹತ್ಯೆ ಮಾಡಿದ್ದಾನೆ. ಸಾಗರ ಜಿಲ್ಲೆಯಲ್ಲಿ ಮೂವರು ಮತ್ತು ಭೋಪಾಲ್‌ನಲ್ಲಿ ಒಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಂದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

ADVERTISEMENT

ಮೊದಲ ಮೂರು ಹತ್ಯೆಗಳು ವಾರದ ಹಿಂದೆ 72 ಗಂಟೆಗಳ ಅಂತರದಲ್ಲಿ ನಡೆದಿವೆ. ನಾಲ್ಕನೇ ಹತ್ಯೆ ಭೋಪಾಲ್‌ನಲ್ಲಿ ಇಂದು ನಡೆದಿದ್ದು, ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ನಾಲ್ಕೂ ಹತ್ಯೆಗಳನ್ನು ತಾನೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಮೇ ತಿಂಗಳಲ್ಲಿ ನಡೆದ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್‌ನ ಹತ್ಯೆಯಲ್ಲಿ ಆತನ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹತ್ಯೆಯಾದ ಸೆಕ್ಯುರಿಟಿಯೊಬ್ಬರ ಮೊಬೈಲ್ ಕಸಿದಿದ್ದ ಆರೋಪಿ ಅದರ ಟವರ್ ಲೊಕೇಶನ್ ಮೂಲಕವೇ ಸಿಕ್ಕಿಬಿದ್ದಿದ್ದಾನೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಕೆಟ್ಟ ಜನಪ್ರಿಯತೆ ಬಯಸಿದ್ದ ಆರೋಪಿಯು ಸೋಶಿಯಲ್ ಮೀಡಿಯಾ ವಿಡಿಯೊಗಳನ್ನು ನೋಡಿ ಹತ್ಯೆ ಮಾಡುತ್ತಿದ್ದ. ಆದರೆ, ಸೈಕೋಪಾತ್ ರೀತಿ ಕಂಡುಬಂದಿಲ್ಲ ಎಂದು ಐಜಿ ಅನುರಾಗ್ ಹೇಳಿದ್ದಾರೆ.

ಪೊಲೀಸರು ಹುಡುಕುತ್ತಿರುವ ವ್ಯಕ್ತಿಯಂತೆ ಕಾಣುತ್ತಿರುವವರೊಬ್ಬನು ಭೋಪಾಲ್‌ನಲ್ಲಿ ಓಡಾಡಿಕೊಂಡಿದ್ದಾನೆ ಎಂಬ ಜನರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.