ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಟ್ರಕ್‌ನಿಂದ 1.20 ಕೋಟಿ ಅಂದಾಜು ಮಾರುಕಟ್ಟೆ ಮೌಲ್ಯದ 1,200 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಗಾಂಜಾ ಸಾಗಿಸಲಾಗುತ್ತಿದೆ ಎನ್ನುವ ಸುಳಿವು ಆಧರಿಸಿ, ವಾಹನದಿಂದ ಭಾನುವಾರ ಮಧ್ಯಾಹ್ನ 1,214 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಿನಿ ಟ್ರಕ್‌ನಲ್ಲಿ ಗಾಂಜಾ ಸಾಗಿಸುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಹಿತೇಂದ್ರನಾಥ ಶರ್ಮಾ ತಿಳಿಸಿದ್ದಾರೆ.
ನಂತರ, ಮಿನಿ ಟ್ರಕ್ ಅನ್ನು ಬಟೋಲಿ ಹಳ್ಳಿ ರಸ್ತೆಯಲ್ಲಿ ತಡೆಯಲಾಯಿತು. ಟ್ರಕ್‌ನಲ್ಲಿ ಹುಡುಕಿದಾಗ ಉಪ್ಪಿನ ಚೀಲಗಳ ಅಡಿಯಲ್ಲಿ ಗಾಂಜಾವನ್ನು ಅಡಗಿಸಿಟ್ಟಿರುವುದನ್ನು ಪತ್ತೆ ಮಾಡಲಾಯಿತು. ಇದು 1.20 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 25 ಲಕ್ಷ ಮೌಲ್ಯದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಮಧ್ಯೆ, ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾವತ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡ ತಂಡಕ್ಕೆ 10,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.