ADVERTISEMENT

24 ಗಂಟೆ ಮೊಬೈಲ್, ಇಂಟರ್ನೆಟ್‌ನಿಂದ ದೂರ: ಜೈನರಿಂದ 'ಡಿಜಿಟಲ್ ಉಪವಾಸ'

ಪಿಟಿಐ
Published 7 ಸೆಪ್ಟೆಂಬರ್ 2022, 16:40 IST
Last Updated 7 ಸೆಪ್ಟೆಂಬರ್ 2022, 16:40 IST
   

ರೈಸೆನ್ (ಮಧ್ಯಪ್ರದೇಶ): ಸಮಾಜದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯು ಹೆಚ್ಚುತ್ತಿರುವ ಮಧ್ಯೆ, ಜೈನ ಸಮುದಾಯದ ಕೆಲವು ಸದಸ್ಯರು ಈಗ ನಡೆಯುತ್ತಿರುವ 'ಪರ್ಯುಶನ್ ಪರ್ವ'ದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇಂಟರ್ನೆಟ್‌ನಿಂದ ದೂರವಿದ್ದು, 24 ಗಂಟೆಗಳ ‘ಡಿಜಿಟಲ್ ಉಪವಾಸ’ ವನ್ನು ಆಚರಿಸುತ್ತಿದ್ದಾರೆ.

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಜೈನ ಸಮುದಾಯದ ಸುಮಾರು 1,000 ಮಂದಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬುಧವಾರ ಬೆಳಿಗ್ಗೆಯಿಂದ 24 ಗಂಟೆಗಳ ಕಾಲ ರಾಜಧಾನಿಯಿಂದ 120 ಕಿಮೀ ದೂರದಲ್ಲಿರುವ ಬೇಗಂಗಂಜ್ ಪಟ್ಟಣದ ದೇವಸ್ಥಾನದಲ್ಲಿ ಇಟ್ಟಿದ್ದಾರೆ ಎಂದು ಸ್ಥಳೀಯ ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.

ಸ್ವಯಂ ಶುದ್ಧೀಕರಣ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಜೈನ ಸಮುದಾಯವು ವಾರ್ಷಿಕವಾಗಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಪರ್ಯುಶನ್ ಪರ್ವವೂ ಒಂದಾಗಿದೆ. ಸಮುದಾಯದವರು ಉಪವಾಸ ಮತ್ತು ಪೂಜೆ ಹಾಗೂ ಇತರ ಧಾರ್ಮಿಕ ಆಚರಣೆಗಳನ್ನು ಮಾಡುವ ಮೂಲಕ ಉತ್ಸವದಲ್ಲಿ ಭಾಗವಹಿಸುತ್ತಾರೆ.

ADVERTISEMENT

‘ಸದ್ಯದ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಜನರು ಇಂಟರ್ನೆಟ್‌ ವ್ಯಸನಿಗಳಾಗಿದ್ದಾರೆ ಮತ್ತು ಸ್ಮಾರ್ಟ್‌ಫೋನ್‌ಗಳು ಹಾಗೂ ಇತರ ಗ್ಯಾಜೆಟ್‌ಗಳನ್ನು ಪ್ರತಿದಿನ ದೀರ್ಘಕಾಲ ಬಳಸುತ್ತಾರೆ’ ಎಂದು ಸ್ಥಳೀಯ ಜೈನ ಸಮುದಾಯದ ಮುಖಂಡ ಅಕ್ಷಯ್ ಜೈನ್ ಹೇಳಿದರು.

‘ಜನರು ಈ ಚಟದಿಂದ ದೂರವಿರಲು ಡಿಜಿಟಲ್ ಉಪವಾಸ ಅಥವಾ ಇಂಟರ್ನೆಟ್ ಇಲ್ಲದೆ ಉಪವಾಸದ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಜನರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, 24 ಗಂಟೆಗಳ ಕಾಲ ದೇವಸ್ಥಾನದಲ್ಲಿ ಇಟ್ಟಿದ್ದಾರೆ’ ಎಂದು ಅವರು ಹೇಳಿದರು.

ಪಿಟಿಐ ಜೊತೆ ಮಾತನಾಡಿದ ಕೌನ್ಸಿಲರ್ ಮತ್ತು ಸಮುದಾಯದ ಪ್ರಮುಖ ನಾಯಕ ಅಜಯ್ ಜೈನ್, ಈ ಉಪವಾಸ ಬುಧವಾರ ಬೆಳಿಗ್ಗೆ ಪ್ರಾರಂಭವಾಗಿದ್ದು, ಸುಮಾರು 1,000 ಜನರು ಇದರಲ್ಲಿ ಭಾಗವಹಿಸಿದ್ದಾರೆ.

‘ನಾವು ಫೋನ್, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲಾ ಇಂಟರ್ನೆಟ್ ಮೋಡ್‌ಗಳಿಂದ ದೂರವಿದ್ದೇವೆ. ಸದ್ಯ ನಡೆಯುತ್ತಿರುವ ಪರ್ಯುಶನ್ ಪರ್ವದ ಉಪವಾಸದ ಸಮಯದಲ್ಲಿ ನಾವು ಕೆಲವು ನೆಚ್ಚಿನ ವಸ್ತುಗಳನ್ನು ತ್ಯಾಗ ಮಾಡಬೇಕು. ಆದ್ದರಿಂದ ನಾವು 24 ಗಂಟೆಗಳ ಕಾಲ ಇಂಟರ್ನೆಟ್ ತ್ಯಜಿಸಲು ನಿರ್ಧರಿಸಿದ್ದೇವೆ’ಎಂದು ಅವರು ಹೇಳಿದರು. ಈ ರೀತಿಯ ಉಪಕ್ರಮವು ಭವಿಷ್ಯದಲ್ಲಿಯೂ ಮುಂದುವರಿಯಬಹುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.