ಮೊರೆನಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಅಂಬಾ ತಹಸಿಲ್‌ನ ಬಾಗ್ ಕಾ ಪುರ ಪ್ರದೇಶದಲ್ಲಿ ಕೋವಿಡ್-19 ಲಸಿಕೆ ಪಡೆದ ನಂತರ 16 ವರ್ಷದ ಹುಡುಗ ಅನಾರೋಗ್ಯಕ್ಕೆ ತುತ್ತಾಗಿರುವುದಾಗಿ ವರದಿಯಾಗಿದೆ. ಅಪ್ರಾಪ್ತನಿಗೆ ಲಸಿಕೆ ನೀಡಿರುವ ಆರೋಪದ ಮೇಲೆ ಅಧಿಕಾರಿಗಳು ಭಾನುವಾರ ತನಿಖೆಗೆ ಆದೇಶಿಸಿದ್ದಾರೆ.
ಸರ್ಕಾರವು ಅಪ್ರಾಪ್ತರಿಗೆ ಯಾವುದೇ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮವನ್ನು ಇನ್ನೂ ಜಾರಿಗೊಳಿಸಿಲ್ಲ. ಹೀಗಿದ್ದರೂ ಅಪ್ರಾಪ್ತರಿಗೆ ಹೇಗೆ ಲಸಿಕೆ ಡೋಸ್ ನೀಡಲಾಗಿದೆ ಎಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊರೆನಾ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಲಸಿಕಾ ಕೇಂದ್ರದಲ್ಲಿ ಕಮಲೇಶ್ ಕುಶ್ವಾಹಾ ಅವರ ಪುತ್ರ ಪಿಲ್ಲುಗೆ ಮೊದಲ ಡೋಸ್ ನೀಡಲಾಗಿದೆ. ಅನಂತರ ಅವರಿಗೆ ತಲೆ ತಿರುಗಿದೆ ಮತ್ತು ಬಾಯಿಯಿಂದ ನೊರೆ ಬರಲು ಪ್ರಾರಂಭವಾಗಿದೆ. ಬಳಿಕ ಅಂಬಾದ ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಪಿಲ್ಲು ಗ್ವಾಲಿಯರ್ ತಲುಪಿದ್ದಾನೋ ಇಲ್ಲವೋ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ದೃಢೀಕರಿಸದ ವರದಿಗಳ ಪ್ರಕಾರ ಅವರು ಗ್ವಾಲಿಯರ್‌ಗೆ ಹೋಗುವ ಬದಲು ಅವರ ಮನೆಗೆ ಮರಳಿದ್ದಾರೆ ಎನ್ನಲಾಗಿದೆ' ಎಂದು ಮೊರೆನಾದ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಮುಖ್ಯ ಅಧಿಕಾರಿ (ಸಿಎಮ್&ಎಚ್‌ಒ) ಡಾ.ಎ.ಡಿ.ಶರ್ಮಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇಂದು ಮುಂಜಾನೆ ಪಿಲ್ಲುವಿನ ಮನೆಗೆ ತಂಡವೊಂದನ್ನು ಕಳುಹಿಸಲಾಗಿದೆ. 'ಪಿಲ್ಲು ಮೂರ್ಛೆರೋಗದಿಂದ ಬಳಲುತ್ತಿದ್ದಾನೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ'. ಅಪ್ರಾಪ್ತನಿಗೆ ಹೇಗೆ ಲಸಿಕೆ ನೀಡಲಾಯಿತು ಎಂಬ ಕುರಿತು ತನಿಖೆಗೆ ಆದೇಶಿಸಲಾಗಿದೆ. ಪಿಲ್ಲುವಿನ ಆಧಾರ್ ಕಾರ್ಡ್ ಅನ್ನು ಪರೀಕ್ಷಿಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಪ್ರಕಾರ, ಪಿಲ್ಲುವಿಗೆ 16 ವರ್ಷವಾಗಿದ್ದು, ಕೋಕ್ ಸಿಂಗ್ ಕಾ ಪುರದ ನಿವಾಸಿ. ಆತನ ಹುಟ್ಟಿದ ದಿನಾಂಕವನ್ನು ಜನವರಿ 1, 2005 ಎಂದು ನಮೂದಿಸಲಾಗಿದೆ ಎಂದು ಹುಡುಗನ ಕುಟುಂಬದ ಪರಿಚಯಸ್ಥರು ತಿಳಿಸಿದ್ದಾರೆ.
ಅಹಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ 'ಝೈಕೊವ್-ಡಿ' ಕೋವಿಡ್-19 ಲಸಿಕೆಯು ಇತ್ತೀಚೆಗೆ ತುರ್ತು ಬಳಕೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯಿಂದ ಅನುಮೋದನೆ ಪಡೆದಿದೆ. ಇದನ್ನು 12 ವರ್ಷ ಮತ್ತು ಮೇಲ್ಪಟ್ಟವರಿಗೆ ನೀಡಲಾಗುವುದು ಎಂದು ಜೈವಿಕ ತಂತ್ರಜ್ಞಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.