ADVERTISEMENT

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು: ಬಹುಮತ ಸಾಬೀತಿಗೆ ಸಿದ್ಧ ಎಂದ ಕಮಲ್‌ನಾಥ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 22:43 IST
Last Updated 13 ಮಾರ್ಚ್ 2020, 22:43 IST
ಕಮಲ್‌ನಾಥ್‌
ಕಮಲ್‌ನಾಥ್‌   

ಭೋಪಾಲ್‌: ‘ನನ್ನ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಹೊಂದಿದೆ. ಇದನ್ನು ಸಾಬೀತುಪಡಿಸಲು ಸಿದ್ಧ’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಶುಕ್ರವಾರ ಹೇಳಿದ್ದಾರೆ.

‘ಮಾರ್ಚ್‌ 16ರಂದು ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಇದೇ ಅವಧಿಯಲ್ಲಿ ಸಭಾಧ್ಯಕ್ಷರು ನಿಗದಿಪಡಿಸಿದ ದಿನಾಂಕದಂದು
ಬಹುಮತ ಸಾಬೀತಿಗೆ ಸಿದ್ಧ’ ಎಂದೂ ತಿಳಿಸಿದ್ದಾರೆ.

ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರನ್ನು ಭೇಟಿಯಾದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ADVERTISEMENT

‘ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರನ್ನು ಅಪಹರಿಸಿದ್ದಾರೆ. ಬಿಜೆಪಿ ನಾಯಕರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ’ ಎಂದು ದೂರಿದರು. ಅವರು ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಮೂರು ಪುಟಗಳ ಪತ್ರವನ್ನೂ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

‘ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ನಮ್ಮ ಶಾಸಕರನ್ನು ಕೂಡಿ ಹಾಕಲಾಗಿದೆ. ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮೇಲೆ ಒತ್ತಡ ಹೇರುವಂತೆ’ ಪತ್ರದಲ್ಲಿ ವಿವರಿಸಿದ್ದಾರೆ.

ಮಧ್ಯಪ್ರದೇಶಕ್ಕೆ ತೆರಳುವ ನಿರ್ಧಾರ ಕೈಬಿಟ್ಟ ಶಾಸಕರು
ಮಧ್ಯಪ್ರದೇಶದ ಆರು ಸಚಿವರು ಸೇರಿದಂತೆ ಕಾಂಗ್ರೆಸ್‌ನಹತ್ತೊಂಬತ್ತು ಮಂದಿ ಬಂಡಾಯ ಶಾಸಕರು ಬೆಂಗಳೂರಿನಿಂದ ಭೋಪಾಲ್‌ಗೆ ವಾಪಸಾಗುವ ನಿರ್ಧಾರದಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.

‘ಎಲ್ಲ ಬಂಡಾಯ ಶಾಸಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ, ಲಾಠಿ ಹಿಡಿದು ಭೋಪಾಲ್‌ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕಾದುಕುಳಿತಿದ್ದರು. ಆದ್ದರಿಂದ ಕೊನೇ ಹಂತದಲ್ಲಿ ಸುರಕ್ಷತೆ ಕಾರಣಗಳಿಂದ ವಾಪಸಾಗುವ ನಿರ್ಧಾರ ಕೈಬಿಡಲಾಯಿತು’ ಎಂದು ಜೋತಿರಾದಿತ್ಯ ಸಿಂಧಿಯಾ ಆಪ್ತ ಮತ್ತು ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಪಂಕಜ್‌ ಚತುರ್ವೇದಿ ಹೇಳಿದರು.

ಈ ಬಂಡಾಯ ಶಾಸಕರುಶುಕ್ರವಾರ ಸಂಜೆ ಬೆಂಗಳೂರಿನಿಂದ ಭೋಪಾಲ್‌ಗೆ ಮರಳುವರಿದ್ದರು. ಕೆಲ ಸುದ್ದಿ ವಾಹಿನಿಗಳು ಬಂಡಾಯ ಶಾಸಕರು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೃಶ್ಯಗಳನ್ನು ಪ್ರಸಾರ ಮಾಡಿದ್ದವು. ಮುಖ್ಯಮಂತ್ರಿ ಕಮಲನಾಥ್‌ ಅವರ ಶಿಫಾರಸಿನ ಮೇಲೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರು ಬೆಂಗಳೂರಿನಲ್ಲಿರುವ ಆರು ಮಂದಿ ಸಚಿವರನ್ನು ಸಚಿವ ಸಂಪುಟದಿಂದ ಶುಕ್ರವಾರ ವಜಾಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.