ಭೋಪಾಲ್: ಮಧ್ಯಪ್ರದೇಶದ ಸೀದೀ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಘಟನೆಗೆ ದೇಶದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈಗ ಈ ಕುರಿತು ಹೇಳಿಕೆ ನೀಡಿರುವ ಸಂತ್ರಸ್ತ ದಶಮತ್ ರಾವತ್, ಆರೋಪಿಯಿಂದ ತಪ್ಪಾಗಿದೆ. ಅವರಿಗೆ ತಪ್ಪಿನ ಅರಿವಾಗಿದೆ. ಅವರನ್ನು ಬಿಡುಗಡೆಗೊಳಿಸಿ ಎಂದು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.
ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹೇಯಕೃತ್ಯ ಎಸಗಿದ್ದ ಆರೋಪಿ ಪ್ರವೇಶ್ ಶುಕ್ಲಾನನ್ನು ಬುಧವಾರ ಬಂಧಿಸಲಾಗಿತ್ತು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 294 (ಅಸಭ್ಯ ವರ್ತನೆ), 504 (ಉದ್ದೇಶ ಪೂರ್ವಕ ಅವಹೇಳನ), ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ (ಎನ್‌ಎಸ್‌ಎ) ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆರೋಪಿಯ ಅಕ್ರಮ ಸ್ವತ್ತುಗಳನ್ನು ನೆಲಸಮಗೊಳಿಸಲಾಗಿದೆ.
ಈ ಹೇಯಕೃತ್ಯ ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ಆರೋಪಿಯು ಸ್ಥಳೀಯ ಬಿಜೆಪಿ ನಾಯಕ ಎಂದು ಕಾಂಗ್ರೆಸ್ ಆರೋಪಿಸಿತ್ತು. ವ್ಯಾಪಕ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತ ದಶಮತ್ ರಾವತ್ ಅವರ ಪಾದಗಳನ್ನು ತೊಳೆದು ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದರು.
ಸಂತ್ರಸ್ತನಿಗೆ ರಾಜ್ಯ ಸರ್ಕಾರ ₹5 ಲಕ್ಷ ಸಹಾಯಧನ ಮತ್ತು ಮನೆ ಕಟ್ಟಲು ಹೆಚ್ಚುವರಿಯಾಗಿ ₹1.5 ಲಕ್ಷ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.