ಭೋಪಾಲ್: ಮಧ್ಯಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹೇಯಕೃತ್ಯ ಎಸಗಿದ್ದ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಪ್ರವೇಶ್ ಶುಕ್ಲಾ ಬಂಧಿತ.ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 294 (ಅಸಭ್ಯ ವರ್ತನೆ), 504 (ಉದ್ದೇಶ ಪೂರ್ವಕ ಅವಹೇಳನ), ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಆರೋಪಿಯು ಸ್ಥಳೀಯ ಬಿಜೆಪಿ ನಾಯಕ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದನ್ನು ಆಡಳಿತಾರೂಢ ಬಿಜೆಪಿ ಅಲ್ಲಗಳೆದಿದೆ. ಆದರೆ, ರಾಜ್ಯ ಬಿಜೆಪಿ ಘಟಕವು ಪ್ರಕರಣದ ಬಗ್ಗೆ ತನಿಖೆ ನಡೆಸಲು ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದೆ ಎಂದು ಅಧ್ಯಕ್ಷ ವಿ.ಡಿ. ಶರ್ಮಾ ತಿಳಿಸಿದ್ದಾರೆ.
ಜಂಜಾತಿ ವಿಕಾಸ ಪ್ರಾಧಿಕಾರದ ಅಧ್ಯಕ್ಷ ರಾಮಲಾಲ್ ರೌಟೆಲ್ ಇದರ ಅಧ್ಯಕ್ಷರಾಗಿದ್ದಾರೆ. ಶಾಸಕರಾದ ಶರದ್ ಕೋಲ್, ಅಮರ್ ಸಿಂಗ್, ಪಕ್ಷದ ರಾಜ್ಯ ಉಪಾಧ್ಯಕ್ಷ ಕಾಂತದೇವ್ ಸಿಂಗ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಆರೋಪಿಯು ಸಿಗರೇಟ್ ಸೇದುತ್ತಾ ಪಾದಚಾರಿ ಮಾರ್ಗದಲ್ಲಿ ಕುಳಿತಿದ್ದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೊ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ನೆಟ್ಟಿಗರು ಮತ್ತು ಪ್ರತಿಪಕ್ಷಗಳಿಂದ ಇದಕ್ಕೆ ತೀವ್ರ ಖಂಡನೆ ವ್ಯಕ್ತವಾದ್ದರಿಂದ ಎಚ್ಚೆತ್ತುಕೊಂಡು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಲು ಸೂಚಿಸಿದ್ದರು.
‘ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಜುಲತಾ ಪಟ್ಲೆ ತಿಳಿಸಿದ್ದಾರೆ.
ಕೃತ್ಯ ನಡೆದಿದ್ದು ಯಾವಾಗ?: ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕಾಂತಿಲಾಲ್ ಭೂರಿಯಾ, ‘ಈ ಕೃತ್ಯ ನಡೆದು ಕೆಲವು ತಿಂಗಳು ಕಳೆದಿವೆ. ಆರೋಪಿ ಬಿಜೆಪಿ ನಾಯಕ. ಹಾಗಾಗಿ, ಸಂತ್ರಸ್ತ ಯುವಕ ಪೊಲೀಸ್ ಠಾಣೆಗೆ ದೂರು ಕೊಡಲು ಭಯಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಜೊತೆಗೆ, ಬಿಜೆಪಿಯೇತರ ರಾಜ್ಯಗಳಲ್ಲಿ ಈ ಪ್ರಕರಣದ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ₹ 2 ಕೋಟಿ ಪರಿಹಾರ ನೀಡಬೇಕು. ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪಿಗೆ ಬಿಜೆಪಿಯ ಉನ್ನತಮಟ್ಟದ ನಾಯಕರ ಜೊತೆಗೆ ಉತ್ತಮ ಸಂಪರ್ಕವಿದೆ ಎಂದಿರುವ ಅವರು, ಸ್ಥಳೀಯ ಶಾಸಕರು ಮತ್ತು ಅವರ ಬೆಂಬಲಿಗರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.
ತನಿಖೆಗೆ ಆದೇಶ: ‘ಇದೊಂದು ಅಮಾನವೀಯ ಕೃತ್ಯ’ ಎಂದು ಖಂಡಿಸಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ, ‘ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷದ ಒತ್ತಾಯದಂತೆ ಆರೋಪಿಯ ಮನೆಯನ್ನು ನೆಲಸಮಗೊಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗುವುದಿಲ್ಲ. ಸರ್ಕಾರಿ ಸ್ವತ್ತು ಅತಿಕ್ರಮಿಸಿದ್ದರಷ್ಟೇ ಬುಲ್ಡೊಜರ್ ನೀತಿ ಅನುಸರಿಸಲಾಗುತ್ತದೆ’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಸೂಚಿಸಿದ ಬಳಿಕವಷ್ಟೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚೌಹಾಣ್ ಕಾಳಜಿ ಪ್ರಶ್ನಿಸಿದ ಮಾಯಾವತಿ
‘ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿದ ಬಳಿಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಎಚ್ಚೆತ್ತುಕೊಂಡಿದೆ. ಇದು ಬುಡಕಟ್ಟು ಜನರು, ದಲಿತರ ಬಗ್ಗೆ ಸರ್ಕಾರಕ್ಕೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ’ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೂಡಲೇ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮಕೈಗೊಂಡರೆ ಸಾಲದು. ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಮನೆಯನ್ನೂ ನೆಲಸಮಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಆರೋಪಿಯು ಬಿಜೆಪಿಗೆ ಸೇರಿದ್ದಾರೆ ಎಂದು ಸರ್ಕಾರ ಕ್ರಮಕ್ಕೆ ಹಿಂಜರಿಯಬಾರದು. ಇಂತಹ ಪ್ರಕರಣಗಳಿಂದ ಎಲ್ಲರೂ ಸಮಾಜದ ಮುಂದೆ ಅವಮಾನ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಕಳಚಿದ ಕೇಸರಿ ಮುಖವಾಡ: ರಾಹುಲ್
ನವದೆಹಲಿ (ಪಿಟಿಐ): ‘ಮೂತ್ರ ವಿಸರ್ಜನೆ ಪ್ರಕರಣವು ಬಿಜೆಪಿಯ ಬುಡಕಟ್ಟು ಮತ್ತು ದಲಿತ ವಿರೋಧಿ ಮುಖವಾಡವನ್ನು ಕಳಚಿಟ್ಟಿದೆ’ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ಬಿಜೆಪಿಯ ಅಧಿಕಾರಾವಧಿಯಲ್ಲಿ ದೇಶದಾದ್ಯಂತ ಬುಡಕಟ್ಟು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕೃತ್ಯ ಎಸಗಿರುವ ಆರೋಪಿಯು ಬಿಜೆಪಿ ನಾಯಕ. ಈತನ ಕೃತ್ಯದಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ’ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಕೇಸರಿ ಪಡೆಯ ಅಸಹ್ಯಕರ ಹಾಗೂ ನೈಜ ವ್ಯಕ್ತಿತ್ವ ಬಯಲಾಗಿದೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.