ADVERTISEMENT

ಬಾವಿಗೆ ಬಿದ್ದವನ ರಕ್ಷಣಾ ಕಾರ್ಯ ನೋಡುತ್ತಿದ್ದ 30 ಮಂದಿಯೂ ಅದರೊಳಗೆ, ಮೂವರ ಸಾವು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 6:13 IST
Last Updated 16 ಜುಲೈ 2021, 6:13 IST
ವಿಧಿಶಾ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ
ವಿಧಿಶಾ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ   

ವಿಧಿಶಾ: ಬಾವಿಗೆ ಬಿದ್ದ ಹುಡುಗನೊಬ್ಬ ರಕ್ಷಣಾ ಕಾರ್ಯವನ್ನು ಅಡ್ಡಗೋಡೆಯ ಸುತ್ತಲೂ ನಿಂತು ಇಣುಕುತ್ತಿದ್ದ ಗ್ರಾಮಸ್ಥರೆಲ್ಲ ಅದರೊಳಗೆ ಬಿದ್ದ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಸಂಭವಿಸಿದೆ.

ಗುರುವಾರ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದ ಗಂಜ್‌ ಬಸೊಡಾ ಎಂಬಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 19 ಮಂದಿಯನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಶುಕ್ರವಾರವೂ ಮುಂದುವರಿದಿದೆ.

ಗುರುವಾರ ರಾತ್ರಿ 9 ಗಂಟೆಗೆ ಹುಡುಗನೊಬ್ಬ ಬಾವಿಯೊಳಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಕೆಲವರು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರು ಬಾವಿಯತ್ತ ಆಗಮಿಸಿ ರಕ್ಷಣಾ ಕಾರ್ಯವನ್ನು ವೀಕ್ಷಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು 'ಪಿಟಿಐ' ವರದಿ ಮಾಡಿದೆ.

ADVERTISEMENT

ಬಾವಿಯ ಸುತ್ತಲು ಕಟ್ಟಿದ್ದ ಅಡ್ಡಗೋಡೆ ಕುಸಿದಿದ್ದರಿಂದ ಈ ದುರ್ಘಟನೆ ನಡೆದಿದೆ. ಸುಮಾರು 20 ಅಡಿ ನೀರು ತುಂಬಿದ್ದ, ಒಟ್ಟು 50 ಅಡಿ ಆಳದ ಬಾವಿಯಲ್ಲಿ ಹುಡುಗನ ರಕ್ಷಣಾ ಕಾರ್ಯವನ್ನು ಗ್ರಾಮಸ್ಥರು ನೋಡುತ್ತಿದ್ದರು. ಈ ಸಂದರ್ಭ ಇಣುಕುತ್ತಿದ್ದವರ ಭಾರ ಹೆಚ್ಚಾಗಿ ಅಡ್ಡಗೋಡೆ ಕುಸಿದಿರಬಹುದು ಎನ್ನಲಾಗಿದೆ.

ರಾತ್ರಿ 11 ಗಂಟೆ ವೇಳೆಗೆ ನಾಲ್ವರು ಪೊಲೀಸ್‌ ಸಿಬ್ಬಂದಿ ಒಳಗೊಂಡು, ಟ್ರ್ಯಾಕ್ಟರ್‌ ಮೂಲಕ ಬಾವಿಗೆ ಬಿದ್ದವರ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ಟ್ರ್ಯಾಕ್ಟರ್‌ ಕೂಡ ಬಾವಿಯತ್ತ ಜಾರಿದೆ.

ಘಟನೆ ಕುರಿತು ಕಳವಳ ವ್ಯಕ್ತ ಪಡಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ರಕ್ಷಣಾ ಕಾರ್ಯ ಸಾಗಿದೆ. ಘಟನೆ ಕುರಿತ ವರದಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಮತ್ತು ಚಿಕಿತ್ಸಾ ವೆಚ್ಛ ನೀಡುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.