ADVERTISEMENT

ಪನ್ನೀರ್‌ ಸೆಲ್ವಂ ಪುತ್ರ ರವೀಂದ್ರನಾಥ್ ಆಯ್ಕೆ ಅಸಿಂಧು: ಮದ್ರಾಸ್‌ ಹೈಕೋರ್ಟ್‌ ಆದೇಶ

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ಸಲ್ಲಿಸಿದ ಆರೋಪ ಪ್ರಕರಣ

ಪಿಟಿಐ
Published 6 ಜುಲೈ 2023, 13:56 IST
Last Updated 6 ಜುಲೈ 2023, 13:56 IST
ಪಿ. ರವೀಂದ್ರನಾಥ್
ಪಿ. ರವೀಂದ್ರನಾಥ್    Twitter: @OPRavindhranath

ಚೆನ್ನೈ: ತಮಿಳುನಾಡಿನ ಥೇಣಿ ಕ್ಷೇತ್ರದ ಸಂಸದ, ಎಐಎಡಿಎಂಕೆ ಉಚ್ಚಾಟಿತ ಸದಸ್ಯ ಓ.ಪಿ.ರವೀಂದ್ರನಾಥ್ ಅವರ ಆಯ್ಕೆಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಅಸಿಂಧುಗೊಳಿಸಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ರವೀಂದ್ರನಾಥ್ ಪದಚ್ಯುತ ಎಐಎಡಿಎಂಕೆ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಅವರ ಪುತ್ರ.

ನ್ಯಾಯಮೂರ್ತಿ ಎಸ್.ಎಸ್. ಸುಂದರ್ ಅವರು, ಥೇಣಿ ಕ್ಷೇತ್ರ ಖಾಲಿಯಾಗಿದೆ ಎಂದು ಪ್ರಕಟಿಸಿದರು. ಆದರೆ, ರವೀಂದ್ರನಾಥ್ ಪರ ವಕೀಲರು ಮಾಡಿದ ಮನವಿಗೆ ಸಮ್ಮತಿ ಸೂಚಿಸಿದ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಆದೇಶ ಜಾರಿಯನ್ನು ಒಂದು ತಿಂಗಳು ಅಮಾನತಿನಲ್ಲಿ ಇರಿಸಿದರು.

ADVERTISEMENT

ಥೇಣಿ ಕ್ಷೇತ್ರದ ಮತದಾರರಾದ ಪಿ.ಮಿಲಾನಿ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ.

ಮಿಲಾನಿ ಪರ ವಕೀಲರಾದ ವಿ. ಅರುಣ್ ಅವರ ಪ್ರಕಾರ, ರವೀಂದ್ರನಾಥ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ತಮ್ಮ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ತಿಗಳು ಸೇರಿ ಬೆಲೆಬಾಳುವ ವಿವಿಧ ವಸ್ತುಗಳ ವಿವರಗಳನ್ನು ಮುಚ್ಚಿಟ್ಟು, ಸುಳ್ಳು ಮಾಹಿತಿ ನೀಡಿದ್ದರು. ಈ ಆರೋಪ ರುಜುವಾತಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು. ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರನಾಥ್ ಅವರು ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದರು.

ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕಳೆದ ವರ್ಷದ ಜುಲೈನಲ್ಲಿ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ತಕ್ಷಣ, ತಮ್ಮ ಪ್ರತಿಸ್ಪರ್ಧಿ ಪನ್ನೀರ್‌ಸೆಲ್ವಂ ಮತ್ತು ರವೀಂದ್ರನಾಥ್ ಸೇರಿ ಇತರರನ್ನು ಉಚ್ಚಾಟಿಸಿದ್ದರು. ರವೀಂದ್ರನಾಥ್ ಅವರನ್ನು ಪಕ್ಷದ ಸಂಸದನಾಗಿ ಪರಿಗಣಿಸದಂತೆಯೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪಳನಿಸ್ವಾಮಿ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.