ಚೆನ್ನೈ: ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾರ್ವಜನಿಕ ಸಭಾಂಗಣ ನಿರ್ಮಿಸಿದ್ದಕ್ಕಾಗಿ ಆಡಳಿತಾರೂಢ ಡಿಎಂಕೆ ಪಕ್ಷದ ಶಾಸಕ ಅರವಿಂದ್ರಮೇಶ್ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ಕಟ್ಟಡವನ್ನು ನೆಲಸಮಗೊಳಿಸಲು ಆದೇಶಿಸಿದೆ.
‘ಇದು ಅರಾಜಕತೆಯ ಕೃತ್ಯದಂತೆ ತೋರುತ್ತದೆ. ಯಾವುದೇ ಶಾಸಕರು ಕಾನೂನನ್ನು ಕೈಗೆ ತೆಗೆದುಕೊಂಡು ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಸರ್ಕಾರಿ ಇಲಾಖೆ ಶಾಸಕರ ಬೇಡಿಕೆ ಪೂರೈಸಿಲ್ಲ ಎಂಬ ಕಾರಣಕ್ಕೆ ತಾವೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದಂತೆ ಕಾಣುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಡಿ ಆದಿಕೇಶವಲು ಅವರನ್ನೊಳಗೊಂಡ ಪೀಠವು ಹೇಳಿದೆ.
ಈ ಕಟ್ಟಡವನ್ನು ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಬೃಹತ್ ಚೆನ್ನೈ ಮಹಾನಗರ ಪಾಲಿಕೆಗೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಅಲ್ಲದೆ ಈ ರೀತಿಯ ಯಾವುದೇ ಕಾರ್ಯಗಳಿಗೆ ಅನುಮತಿ ನೀಡದಂತೆ ಸೂಚಿಸಿದೆ.
ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಆಯುಕ್ತರಿಗೆ ಪೀಠವು ಹೇಳಿದೆ.
‘ಶಾಸಕ ಎಸ್.ಅರವಿಂದ್ರಮೇಶ್ ಅವರು ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಜುಲೈ 9 ರಂದು ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿ ಡಿ. ವಿಜಯಭಾರತಿ ಎಂಬುವರು ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.