ಚೆನ್ನೈ: ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಜಾಮೀನು ನೀಡಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಬಂಧಿತರಾಗಿರುವ ಸೆಂಥಿಲ್, ವೈದ್ಯಕೀಯ ಆಧಾರದ ಮೇಲೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಜಯಚಂದ್ರನ್ ‘ಅವರ ಆರೋಗ್ಯ ಸ್ಥಿತಿ ಸಂಬಂಧ ಸಲ್ಲಿಸಿರುವ ವೈದ್ಯಕೀಯ ವರದಿಯು ಜಾಮೀನು ನೀಡಲು ಪೂರಕವಾಗಿಲ್ಲ’ ಎಂದು ಹೇಳಿದರು.
‘ಸೆಂಥಿಲ್ ಸದ್ಯ ಸರ್ಕಾರದಲ್ಲಿ ಖಾತೆ ರಹಿತ ಸಚಿವರಾಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಅವರ ನಿವಾಸದಲ್ಲಿ ಶೋಧ ನಡೆಸಿದ ವೇಳೆ ಸಚಿವರ ಬೆಂಬಲಿಗರು ದಾಳಿ ನಡೆಸಿದ ನಿದರ್ಶನವಿದೆ. ಅಲ್ಲದೇ, ಅವರ ಸಹೋದರ ಅಶೋಕ್ ಕುಮಾರ್ ತಲೆಮರೆಸಿಕೊಂಡಿದ್ದು ಇ.ಡಿ ತನಿಖೆಗೆ ಸಹಕರಿಸುತ್ತಿಲ್ಲ. ಇದು ತನಿಖೆಯ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದರು.
‘ಒಂದು ವೇಳೆ ಅವರು ಜಾಮೀನಿನ ಮೇಲೆ ಹೊರಬಂದರೆ ಸಾಕ್ಷಿಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಅವರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದರು.
ಉದ್ಯೋಗಕ್ಕಾಗಿ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಜೂನ್ 14ರಂದು ಬಾಲಾಜಿ ಅವರ ನಿವಾಸ ಹಾಗೂ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಬಳಿಕ ಅವರನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.